ನವದೆಹಲಿ: ತ್ರಿಪುರಾದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಎಡಪಕ್ಷಗಳು, ಬಿಜೆಪಿ ಬೆಂಬಲಿಗರು ವಿರೋಧ ಪಕ್ಷಗಳ ಕಾರ್ಯಕರ್ತರ ಮನೆಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಿದ್ದಾರೆ ಮತ್ತು ಪಕ್ಷದ ಕಚೇರಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಪಿಎಂ ಪಕ್ಷದ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯಲ್ಲಿ ಬಿಜೆಪಿ ಹಿಂಸಾಚಾರದ ಪರಾಕಾಷ್ಠೆಯನ್ನು ಬಿಚ್ಚಿಟ್ಟಿದೆ ಎಂದು ಆರೋಪಿಸಲಾಗಿದೆ. ಮಾರ್ಚ್ 6 ರವರೆಗೆ ಬಿಜೆಪಿ ಗ್ಯಾಂಗ್‌ಗಳಿಂದ ಸುಮಾರು 1,000 ದಾಳಿ ಮತ್ತು ಹಿಂಸಾಚಾರದ ಘಟನೆಗಳು ರಾಜ್ಯದಾದ್ಯಂತ ನಡೆದಿವೆ ಎಂದು ಹೇಳಿದೆ.
‘ಸಿಪಿಎಂ, ಎಡರಂಗ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ದೈಹಿಕ ದಾಳಿ, ಅವರ ಮನೆಗಳನ್ನು ಲೂಟಿ ಮಾಡುವುದು ಅಥವಾ ಸುಟ್ಟು ಹಾಕುವುದು, ಪಕ್ಷದ ಕಚೇರಿ ಧ್ವಂಸಗೊಳಿಸುವುದು. ರಬ್ಬರ್ ತೋಟಗಳು, ಬೆಳೆಗಳನ್ನು ಸುಟ್ಟು ಹಾಕುವುದು ಮತ್ತು ಅವರ ವಾಹನಗಳನ್ನು ಹಾನಿಗೊಳಿಸುವುದು ಮುಂತಾದ ಅವರ ಜೀವನೋಪಾಯದ ಸಾಧನ ನಾಶಪಡಿಸುವುದು ಈ ದಾಳಿಯ ಉದ್ದೇಶವಾಗಿದೆ’ ಎಂದು ಪಕ್ಷ ಆರೋಪಿಸಿದೆ.
ಸಿಪಿಎಂ ಸಂಘಟನೆಯ ಸಾಮೂಹಿಕ ಬೆಂಬಲವನ್ನು ಬೆದರಿಸುವ ಉದ್ದೇಶದಿಂದ ತ್ರಿಪುರಾದಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಹಿಂಸಾಚಾರದ ನಿರಂತರ ಯೋಜನೆಯಾಗಿದೆ ಎಂದು ಸಂಪಾದಕೀಯ ಹೇಳಿದೆ.
‘ಚುನಾವಣೆಗೆ ಮೊದಲು ಅಥವಾ ನಂತರ, ಕಮ್ಯುನಿಸ್ಟ್ ಮತ್ತು ಎಡಪಂಥೀಯ ಚಳವಳಿಯ ಮೇಲಿನ ದಾಳಿ ಮುಂದುವರಿಯುತ್ತದೆ. ಕಮ್ಯುನಿಸ್ಟ್ ಚಳವಳಿಯನ್ನೇ ನಿರ್ನಾಮ ಮಾಡುವುದು ಇದರ ಉದ್ದೇಶ’ ಎಂದು ಅದು ಹೇಳಿದೆ.
‘ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಹಸುಗಳನ್ನು ಕೊಲ್ಲುವುದು ಅವರ ವಿಜಯೋತ್ಸವದ ಮೆರವಣಿಗೆಯನ್ನು ಸೂಚಿಸುತ್ತದೆ. ಜಾತ್ಯತೀತ, ಪ್ರಜಾಸತ್ತಾತ್ಮಕ, ಎಡಪಂಥೀಯ ಶಕ್ತಿಗಳು ಒಗ್ಗಟ್ಟಾಗಿ ನಿಂತರೆ ಬಿಜೆಪಿ ಸೋಲಿಸಬಹುದು’ ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.