ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ರಾಮನವಮಿ ಪ್ರಯುಕ್ತ ಏಪ್ರಿಲ್ 17ರಂದು ರಜೆ ನೀಡುವುದಾಗಿ ಘೋಷಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಬಂಗಾಳದಲ್ಲಿ ದುರ್ಗಾ ಪೂಜೆ, ಕಾಳಿ ಪೂಜೆ, ಸರಸ್ವತಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಕಳೆದ ವರ್ಷವೂ ಸೇರಿದಂತೆ ಈ ಹಿಂದೆ ರಾಮನವಮಿ ಮೆರವಣಿಗೆಗಳಲ್ಲಿ ಕಲ್ಲು ತೂರಾಟ, ಹಿಂಸಾಚಾರದಂತಹ ಘಟನೆಗಳು ನಡೆದಿದ್ದವು.
ಟಿಎಂಸಿ ಸರ್ಕಾರದಿಂದ ರಜೆ ಘೋಷಣೆ ಆದೇಶ ಹೊರಬಿದ್ದ ಬೆನ್ನಲ್ಲೇ, ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಮೆರವಣಿಗೆಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜತೆಗೆ ರಜೆ ಘೋಷಣೆಯು ಕೇವಲ ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿದೆ ಎಂದೂ ದೂರಿದೆ.
‘ಪ್ರತಿ ಬಾರಿ ‘ಜೈ ಶ್ರೀ ರಾಮ್’ ಎಂದು ಕೇಳಿದಾಗ ತೀವ್ರವಾಗಿ ಕೋಪಗೊಳ್ಳುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು (ಏಪ್ರಿಲ್ 17) ರಜೆ ನೀಡುವುದಾಗಿ ಘೋಷಿಸಿದ್ದಾರೆ. ಅವರು (ಮಮತಾ) ತಮ್ಮ ವಿರುದ್ಧದ ಹಿಂದೂ ವಿರೋಧಿ ಇಮೇಜ್ ಅನ್ನು ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ರಜೆ ನೀಡುವುದಾಗಿ ಆದೇಶಿಸಿದ್ದಾರೆ. ಆದರೆ, ಇದು ತುಂಬಾ ತಡವಾಗಿದೆ‘ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದಾರೆ.
‘ಮುಖ್ಯವಾಗಿ ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಕಲ್ಲು ತೂರಾಟವಾಗದಂತೆ ಮಮತಾ ಬ್ಯಾನರ್ಜಿ ಅವರು ಖಚಿತಪಡಿಸಬೇಕಿದೆ. ಅದು ಅವರಿಂದ ಆಗುತ್ತದೆಯೇ’ ಎಂದು ಮಾಳವಿಯಾ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.