ರಾಯ್‌ಪುರ: ಛತ್ತೀಸಗಢದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡಿರುವ ಬಿಜೆಪಿ, ಇಂದು (ಸೋಮವಾರ) ಹೊಸದಾಗಿ ಆಯ್ಕೆಯಾದ ಎಲ್ಲ ಶಾಸಕರ ಸಭೆಯನ್ನು ಕರೆದಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯ್‌ಪುರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಾದ ಕುಶಾಭೌ ಠಾಕ್ರೆ ಪರಿಸರದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಛತ್ತೀಸಗಢದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 54 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ. ಕಾಂಗ್ರೆಸ್ 34 ಸ್ಥಾನಗಳನ್ನು ಪಡೆದುಕೊಂಡರೆ, ಗೊಂಡ್ವಾನಾ ಗಂತಂತ್ರ ಪಕ್ಷ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೊ, ಕೇಂದ್ರ ಸಚಿವೆ ರೇಣುಕಾ ಸಿಂಗ್ ಮತ್ತು ಕೇಂದ್ರದ ಮಾಜಿ ಸಚಿವ ವಿಷ್ಣು ಡಿಯೊ ಸಾಯಿ ಸೇರಿದಂತೆ ಎಲ್ಲಾ 54 ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಶಾಸಕರ ಪರಿಚಯದ ಸಭೆ ಇದಾಗಿರಲಿದ್ದು, ಶಾಸಕಾಂಗ ಪಕ್ಷದ ಸಭೆ ನಡೆಸುವ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಛತ್ತೀಸಗಢದ ಬಿಜೆಪಿ ಉಸ್ತುವಾರಿ ಓಂ ಮಾಥುರ್, ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಛತ್ತೀಸಗಢ ಚುನಾವಣೆಗೆ ಪಕ್ಷದ ಜಂಟಿ ಉಸ್ತುವಾರಿ ಮತ್ತು ರಾಜ್ಯದ ಪಕ್ಷದ ಸಹ ಪ್ರಭಾರಿ ನಿತಿನ್ ನಬಿನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.