ADVERTISEMENT

ಆಪ್‌ನ 7 ಶಾಸಕರಿಗೆ ಬಿಜೆಪಿಯಿಂದ ತಲಾ 10 ಕೋಟಿಯ ಆಮಿಷ: ಕೇಜ್ರಿವಾಲ್‌ 

ಏಜೆನ್ಸೀಸ್
Published 2 ಮೇ 2019, 4:11 IST
Last Updated 2 ಮೇ 2019, 4:11 IST
   

ನವದೆಹಲಿ: ದೆಹಲಿಯ ಆಪ್‌ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಏಳು ಶಾಸಕರಿಗೆ ತಲಾ ₹10 ಕೋಟಿ ಆಮಿಷವೊಡ್ಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

‘ನಮ್ಮನ್ನು ಬಿಜೆಪಿ ನಾಯಕರು ಸಂಪರ್ಕಿಸುತ್ತಿದ್ದಾರೆ. ಹತ್ತು ಕೋಟಿ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ನಮ್ಮ ಏಳು ಶಾಸಕರು ಕಳೆದ ಮೂರು ದಿನಗಳಿಂದೀಚೆಗೆ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಬಿಜೆಪಿ ನಮ್ಮ ಶಾಸಕರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಇದು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರಿಗೆ ತಕ್ಕುದಲ್ಲ. ಮೊನ್ನೆಯಷ್ಟೇ ಮೋದಿ ಅವರು ಪಶ್ಚಿಮ ಬಂಗಾಳದ ಟಿಎಂಸಿಯ 40 ಶಾಸಕರನ್ನು ಖರೀದಿ ಮಾಡಿ ಸರ್ಕಾರ ಕೆಡವುವುದಾಗಿ ಹೇಳಿದ್ದರು,’ ಎಂದು ಕೇಜ್ರಿವಾಲ್‌ ಕಿಡಿಕಾರಿದ್ದಾರೆ.

ಈ ನಡುವೆ ಆಪ್‌ನ ನಾಯಕ ಮನೀಶ್‌ ಸಿಸೋಡಿಯಾ ಅವರೂ ಇದೇ ಆರೋಪ‍ ಮಾಡಿದ್ದಾರೆ. ‘ಬಿಜೆಪಿ ನಾಯಕರು ನಮ್ಮ ಶಾಸಕರನ್ನು ಸಂಪರ್ಕಿಸಿ ₹10 ಕೋಟಿಗಳ ಆಮಿಷ ಒಡ್ಡಿದ್ದಾರೆ. ನಾನು ಮೋದಿ ಮತ್ತು ಅಮಿತ್‌ ಶಾಗೆ ಸವಾಲು ಹಾಕುವುದೇನೆಂದರೆ, ಶಾಸಕರನ್ನು ಖರೀದಿ ಮಾಡುವುದು ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ಕುರಿತು ಚರ್ಚೆಗೆ ಬನ್ನಿ ಎಂದು ಒತ್ತಾಯಿಸುತ್ತೇನೆ. ಆದರೆ, ಬಿಜೆಪಿ ಕಳೆದ ಒಂದು ವರ್ಷದಿಂದಲೂಶಾಸಕರನ್ನು ಖರೀದಿ ಮಾಡುವಲ್ಲಿ ನಿರತವಾಗಿದೆ,’ ಎಂದುಆರೋಪಿಸಿದರು.

ADVERTISEMENT

ಪಶ್ಚಿಮ ಬಂಗಾಳದ ಸೆರಮ್‌ಪೋರ್‌ನಲ್ಲಿ ಬಿಜೆಪಿ ಸಮಾವೇಶದಲ್ಲಿ ಇತ್ತೀಚೆಗೆ ಮಾತನಾಡುತ್ತಿದ್ದ ನರೇಂದ್ರ ಮೋದಿ, ‘ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ರಕ್ಷಣೆ ಮಾಡಲು ಇನ್ನಾರಿಂದಲೂ ಸಾಧ್ಯವಿಲ್ಲ,’ ಎಂದು ಹೇಳಿದ್ದರು.

ಹೀಗಿರುವಾಗಲೇ ಆಮ್‌ ಆದ್ಮಿ ಪಕ್ಷದ ನಾಯಕರು ಬಿಜೆಪಿ ಮತ್ತು ಮೋದಿ ಅವರ ವಿರುದ್ಧ ಮಾಡಿರುವ ಈ ಆರೋಪ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.