ಚೆನ್ನೈ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ, ತನ್ನ 'ಒಂದು ರಾಷ್ಟ್ರ, ಒಂದು ಚುನಾವಣೆ' ಯೋಜನೆಯನ್ನು ದೇಶದ ಜನರ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಟೀಕಿಸಿದ್ದಾರೆ.
ಡಿಎಂಕೆ ಅಧ್ಯಕ್ಷರೂ ಆಗಿರುವ ಸ್ಟಾಲಿನ್, ಪಕ್ಷದ 75ನೇ ವರ್ಷಾಚರಣೆ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯನ್ನು ಉಲ್ಲೇಖಿಸಿ, 'ಒಂದು ಹಂತದಲ್ಲಿ ಚುನಾವಣೆ ನಡೆಸಲಾರದವರು, ಒಂದು ರಾಷ್ಟ್ರ; ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇದು, ಛಾವಣಿ ಏರಿ ಕೋಳಿ ಹಿಡಿಯಲಾರದವರು ಬೇರೆಯವರಿಗೆ ದಾರಿ ತೋರಿಸುವಂತೆ ಇದೆ. ಒಂದು ರಾಷ್ಟ್ರ; ಒಂದು ಚುನಾವಣೆ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ' ಎಂದು ಕುಟುಕಿದ್ದಾರೆ.
ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಿಲ್ಲ. 240 ಸಂಸದರೊಂದಿಗೆ ಉಳಿದುಕೊಂಡಿದೆ ಎಂದಿರುವ ಅವರು, 'ಎಚ್ಚರದಿಂದಿರಿ. ಸಣ್ಣ ವ್ಯತ್ಯಾಸವಾದರೂ ನಾವು ಲಗ್ಗೆ ಇಡುತ್ತೇವೆ' ಎಂದು ಎಚ್ಚರಿಸಿದ್ದಾರೆ. ಮುಂದುವರಿದು, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಇಂಡಿಯಾ ಮೈತ್ರಿಕೂಟಕ್ಕೆ ತಮಿಳುನಾಡು ಸರ್ಕಾರ ಸ್ಫೂರ್ತಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಮತ್ತು ಸೆಪ್ಟೆಂಬರ್ 25ರಂದು 2ನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತದಾನವಾಗಿದೆ.
ಅಕ್ಟೋಬರ್ 1ರಂದು 40 ಕ್ಷೇತ್ರಗಳಿಗೆ ಅಂತಿಮ ಹಂತದಲ್ಲಿ ಮತದಾನವಾಗಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.