ಚೆನ್ನೈ: ಪರಿಹಾರವಾಗಿರುವ ಕಚ್ಚತೀವು ಸಮಸ್ಯೆಯನ್ನು ಬಿಜೆಪಿಯು ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದು, ಇದರಿಂದ ಯಾವುದೇ ಉಪಯೋಗವಾಗುವುದಿಲ್ಲ ಎಂದು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಶನಿವಾರ ತಿಳಿಸಿದ್ದಾರೆ.
‘ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಅವರು ತಾವು ತಮಿಳರು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಅವರು ತಮಿಳ್ ಇಸೈ ಸೌಂದರರಾಜನ್, ಎಲ್.ಮುರುಗನ್ ಮತ್ತು ಕೆ.ಅಣ್ಣಾಮಲೈ ಅವರಂತೆ ತಮಿಳುನಾಡಿನಿಂದಲೇ ಚುನಾವಣೆಗೆ ಸ್ಪರ್ಧಿಸಿ, ಕಚ್ಚತೀವು ವಿಷಯದ ಬಗ್ಗೆ ಚರ್ಚಿಸಲಿ. ಯಾಕೆ ಅವರು ಇಲ್ಲಿಂದ ಸ್ಪರ್ಧಿಸಲ್ಲ. ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಅವಿತುಕೊಂಡು ಈ ವಿಷಯದ ಬಗ್ಗೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.
‘ಈ ಬಗ್ಗೆ ಮಾತನಾಡುವಾಗ ಜಾಗರೂಕರಾಗಿರಬೇಕು. ಇದು 25 ಲಕ್ಷ ಶ್ರೀಲಂಕಾ ತಮಿಳರು ಮತ್ತು 10 ಲಕ್ಷ ಭಾರತೀಯ ತಮಿಳರು ಸೇರಿ ಒಟ್ಟು 35 ಲಕ್ಷ ತಮಿಳರ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಕೇಂದ್ರ ಸಚಿವರ ಹೇಳಿಕೆಗಳು ಶ್ರೀಲಂಕಾ ಸರ್ಕಾರ ಮತ್ತು ಅಲ್ಲಿ ನೆಲೆಸಿರುವ ತಮಿಳರ ನಡುವೆ ವಿವಾದವನ್ನು ಸೃಷ್ಟಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.