ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ, ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಗಳಿಸಿದ ಹಣವನ್ನು ಬಿಜೆಪಿಯು ಇತರ ರಾಜ್ಯಗಳಲ್ಲಿನ ಚುನಾವಣಾ ಪ್ರಚಾರಗಳಿಗೆ ಬಳಿಸಿಕೊಳ್ಳುತ್ತಿದೆ ಎಂದು ಆರೊಪಿಸಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೊರೇನ್, 'ಪ್ರಶ್ನೆಪತ್ರಿಕೆ ಸೋರಿಕೆಯಿಂದ ಗಳಿಸಿದ ಹಣದಿಂದ ಜಾರ್ಖಂಡ್ ಚುನಾವಣೆ ವೇಳೆ ಬಿಜೆಪಿ ಆಡಂಬರ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಕಳ್ಳತನದ ಪ್ರಕರಣಗಳನ್ನೂ ತನಿಖೆ ನಡೆಸುತ್ತಿರುವ ಇ.ಡಿ, ಸಿಬಿಐ, ಎನ್‌ಐಎ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ಆರಂಭಿಸಿಲ್ಲ. ಏಕೆಂದರೆ, ಅದರ ಹಿಂದೆ ಬಿಜೆಪಿ ಇದೆ. ಚುನಾವಣೆಗಳು ಮುಗಿದ ನಂತರ ಆ ಹಣದಿಂದಲೇ ಶಾಸಕರು, ಸಂಸದರನ್ನು ಖರೀದಿಸುತ್ತಿದೆ' ಎಂದು ದೂರಿದ್ದಾರೆ.
'ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣವು ಹಲವು ಜೀವಗಳನ್ನು ಬಲಿ ಪಡೆದಿದೆ. ಜಾರ್ಖಂಡ್‌ನಲ್ಲಿ ಒಂದು ಪ್ರಶ್ನೆಪತ್ರಿಕೆ ಸೋರಿಕೆಯಾದದ್ದಕ್ಕೆ ನಾವು ಕಠಿಣ ಕಾನೂನು ರೂಪಿಸಿದ್ದೇವೆ. ಆದರೆ, ಬಿಜೆಪಿಯು ಅದನ್ನು 'ಕರಾಳ ಕಾನೂನು' ಎಂದು ಆರೋಪಿಸಿ ರಾಜಭವನಕ್ಕೆ ಹೋಗಿತ್ತು' ಎಂದು ಹೇಳಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.
ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ನವೆಂಬರ್ 13ರಂದು ಮತದಾನ ನಡೆದಿದೆ. ಉಳಿದ ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನವಾಗಲಿದೆ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.