ADVERTISEMENT

ಪಶ್ಚಿಮ ಬಂಗಾಳ: CM ಹಣೆಗೆ ಗಾಯ: ತನಿಖೆಗೆ BJP ಆಗ್ರಹ; ರಾಜಕೀಯ ಬೇಡ ಎಂದ TMC

ಪಿಟಿಐ
Published 15 ಮಾರ್ಚ್ 2024, 14:32 IST
Last Updated 15 ಮಾರ್ಚ್ 2024, 14:32 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಮನೆಯಲ್ಲಿ ಬಿದ್ದು ಗಾಯಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿಂದಿಂದ ಯಾರೋ ನೂಕಿದಂತಾದ ಅನುಭವ ಕುರಿತು ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ಈ ಘಟನೆಯನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸದಂತೆ ಬಿಜೆಪಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ADVERTISEMENT

‘ಮಮತಾ ಬ್ಯಾನರ್ಜಿ (69) ಅವರು ಕಾಳಿಘಾಟ್‌ನಲ್ಲಿರುವ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಇದರಿಂದಾಗಿ ಅವರ ಹಣೆ ಮತ್ತು ಮೂಗಿಗೆ ಪೆಟ್ಟಾಗಿತ್ತು. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ತಳ್ಳಿದ ಅನುಭವವಾಗಿದ್ದರಿಂದ ಅವರು ಬಿದ್ದಿದ್ದಾರೆ’ ಎಂದು ಆಸ್ಪತ್ರೆಯ ನಿರ್ದೇಶಕ ಮನಿಮೋಯ್ ಬಂಡೋಪಾಧ್ಯಾಯ ಶುಕ್ರವಾರ ತಿಳಿಸಿದ್ದರು.

‘ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ಕೈಗೊಂಡು ಸತ್ಯವನ್ನು ಹೊರತರಬೇಕಿದೆ’ ಎಂದು ಬಿಜೆಪಿ ನಾಯಕ ಹಾಗೂ ಸಂಸದ ದಿಲೀಪ್ ಘೋಷ್ ಆಗ್ರಹಿಸಿದ್ದಾರೆ.

‘ಮುಖ್ಯಮಂ‌ತ್ರಿಯನ್ನು ಯಾರೋ ಹಿಂದಿನಿಂದ ತಳ್ಳಿದರು ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕರು ಗುರುವಾರ ಹೇಳಿದ್ದರು. ಈಗ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಹೀಗಾಗಿ ಇದರಲ್ಲಿ ಏನೋ ಸಂಶಯ ಅಡಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವುದು ಅಗತ್ಯ. ಈ ವಿಷಯದಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ನಾಗರಿಕರಿಗೆ ಸರಿಯಾದ ಮಾಹಿತಿ ತಿಳಿಯುವ ಹಕ್ಕಿದೆ’ ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಶಶಿ ಪಂಜಾ, ಪ್ರಕರಣವನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿದ್ದಾರೆ.

‘ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗಿದ್ದಲ್ಲಿ, ಅವರಿಗೆ ತಳ್ಳಿದಂತ ಅನುಭವವಾಗುವುದು ವೈದ್ಯಕೀಯ ವಿಜ್ಞಾನದಲ್ಲಿ ಸಾಮಾನ್ಯ. ಈ ಕುರಿತಂತೆ ವೈದ್ಯರು ವಿವರಣೆ ನೀಡಿದ್ದಾರೆ. ಮಮತಾ ಅವರ ಹಣೆಗೆ ಪೆಟ್ಟಾಗಿ, ರಕ್ತ ಸುರಿಯುತ್ತಿರುವ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಹೀಗಾಗಿ ಈ ವಿಚಾರವನ್ನು ರಾಜಕೀಯಗೊಳಿಸಬಾರದು’ ಎಂದಿದ್ದಾರೆ.

ಮುಖ್ಯಮಂತ್ರಿಯನ್ನು ‘ಹಿಂದಿನಿಂದ ತಳ್ಳಿದ’ ಅನುಭವಕ್ಕೆ ಸಂಬಂಧಿಸಿದಂತೆ ಬಂಡೋಪಾಧ್ಯಾಯ ಅವರ ಹೇಳಿಕೆಯು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ಚಿಕಿತ್ಸೆ ನೀಡುವ ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಗುರುವಾರ ನೀಡಿದ್ದ ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.