ADVERTISEMENT

ಅಸ್ಸಾಂನಲ್ಲಿ ಭಾರತ ಜೋಡೊ ಯಾತ್ರೆಗೆ ಹಲವು ತೊಡಕು: ಜೈರಾಮ್‌ ರಮೇಶ್‌

ಎಫ್‌ಐಆರ್‌ ದಾಖಲಿಸುವ, ಜೈಲಿಗೆ ಕಳುಹಿಸುವ ಬೆದರಿಕೆ: ಜೈರಾಮ್‌ ರಮೇಶ್‌

ಪಿಟಿಐ
Published 19 ಜನವರಿ 2024, 15:56 IST
Last Updated 19 ಜನವರಿ 2024, 15:56 IST
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಅಸ್ಸಾಂನ ಮಾಜುಲಿಯಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಕೈಗೊಂಡ ವೇಳೆ  ಅವರೊಂದಿಗೆ ಜಾನಪದ ಕಲಾವಿದರು ಫೋಟೊ ತೆಗೆಸಿಕೊಂಡರು ಪಿಟಿಐ ಚಿತ್ರ
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಅಸ್ಸಾಂನ ಮಾಜುಲಿಯಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಕೈಗೊಂಡ ವೇಳೆ  ಅವರೊಂದಿಗೆ ಜಾನಪದ ಕಲಾವಿದರು ಫೋಟೊ ತೆಗೆಸಿಕೊಂಡರು ಪಿಟಿಐ ಚಿತ್ರ   

ಮಾಜುಲಿ, ಅಸ್ಸಾಂ (ಪಿಟಿಐ): ದಕ್ಷಿಣದಿಂದ ಉತ್ತರದವರೆಗೆ ಸಾಗಿದ ಪಕ್ಷದ ಮೊದಲ ಭಾರತ ಜೋಡೊ ಯಾತ್ರೆಯು ಬಿಜೆಪಿ ಆಡಳಿತದ ರಾಜ್ಯಗಳನ್ನು ಹಾದು ಹೋಗುವಾಗ  ಸಮಸ್ಯೆಗಳನ್ನು ಎದುರಿಸಿರಲಿಲ್ಲ. ಅಸ್ಸಾಂನಲ್ಲಿ ಎರಡು ದಿನಗಳಲ್ಲಿ ಎದುರಿಸಿದಷ್ಟು ಸಂಕಷ್ಟಗಳನ್ನು ಎಲ್ಲಿಯೂ ಎದುರಿಸಿರಲಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಶುಕ್ರವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಬಗ್ಗೆ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಅವರು ಯಾಕೆ ಅಷ್ಟು ಹೆದರಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು. 

‘ಮೊದಲ ಯಾತ್ರೆಯಲ್ಲಿ ಬಿಜೆಪಿ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಲಾಗಿತ್ತು. ಕಾಂಗ್ರೆಸ್‌ ಈ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಮತ್ತು ಸರ್ಕಾರವನ್ನೂ ಟೀಕಿಸಿತ್ತು . ಆದರೆ ಇದೇ ಮೊದಲ ಬಾರಿಗೆ 24 ಗಂಟೆಗಳೊಳಗೆ ಮುಖ್ಯಮಂತ್ರಿಯೊಬ್ಬರು ದಿಗಿಲುಗೊಂಡಿದ್ದಾರೆ. ಎಫ್‌ಐಆರ್‌ ದಾಖಲಿಸುವ ಮತ್ತು ಜೈಲಿನ ಶಿಕ್ಷೆಯ ಬೆದರಿಕೆಯನ್ನು ಒಡ್ಡಲಾಗಿದೆ’ ಎಂದು ಆರೋಪಿಸಿದರು.

ADVERTISEMENT

ಅಸ್ಸಾಂನಲ್ಲಿ ಇದೇ 25ರವರೆಗೆ  ಯಾತ್ರೆ ಮುಂದುವರಿಯಲಿದೆ. 17 ಜಿಲ್ಲೆಗಳಲ್ಲಿ 833 ಕಿ.ಮೀ ಸಂಚರಿಸಲಿದೆ ಎಂದು ರಮೇಶ್‌ ಹೇಳಿದರು.

ಅನುಮತಿ ಪಡೆಯದೆ ಯಾತ್ರೆಯು ಗುವಾಹಟಿ ತಲುಪಿದರೆ ಯಾತ್ರೆಯಲ್ಲಿ ಭಾಗವಹಿಸಿರುವ ಇಬ್ಬರು ‘ದುಷ್ಟ ಶಕ್ತಿ‘ಗಳ ವಿರುದ್ಧ  ಲೋಕಸಭೆ ಚುನಾವಣೆ ಬಳಿಕ ಬಂಧನದಂತಹ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬೆದರಿಕೆ ಹಾಕಿದ್ದಾರೆ. ಆದರೆ ಈ ಇಬ್ಬರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ಬೋರಾ ಆಕ್ರೋಶ: 

ಅಸ್ಸಾಂನಲ್ಲಿ ಯಾತ್ರೆ ಮಾರ್ಗ ಬದಲಿಸಿದ ಆರೋಪದ ಮೇಲೆ ಮುಖ್ಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ರಸ್ತೆಯಲ್ಲಿ ನಡೆಯಲು ಅನೇಕ ಸಲ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮ ಮಾಡಿರುವುದು ಎಷ್ಟು ಸರಿ ಎಂದು ಅಸ್ಸಾಂ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೋರಾ ಪ್ರಶ್ನಿಸಿದರು.

ಭಾರತ ಜೋಡೊ ನ್ಯಾಯ ಯಾತ್ರೆಯ ಮಾರ್ಗವನ್ನು ಮುಖ್ಯ ಸಂಘಟಕ ಕೆ.ಬಿ ಬೈಜು ಅವರು ನಿರ್ಧರಿಸಿಲ್ಲ. ಆದರೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೋರ್‌ಹಾಟ್‌ನಲ್ಲಿ ಅನುಮತಿ ನೀಡಿದ ಮಾರ್ಗಗಳನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಯಾತ್ರೆ ತೆರಳಿದೆ ಎಂದು ಆರೋಪಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

‘ಅನುಮತಿ ಪಡೆದ ರಸ್ತೆಯಲ್ಲಿ ಸಂಚರಿಸುವುದು ಬಿಟ್ಟು ಬೇರೆ ಮಾರ್ಗದಲ್ಲಿ ಸಾಗಿದ ಯಾತ್ರೆಯು ಆ ಪ್ರದೇಶದಲ್ಲಿ ಸಂಚಾರ ಅವ್ಯವಸ್ಥೆಗೆ ಕಾರಣವಾಗಿತ್ತು. ಕಾಲ್ತುಳಿತದಂತಹ ವಾತಾವರಣವೂ ಸೃಷ್ಟಿಯಾಗಿತ್ತು. ಜೋರಾಹಾಟ್‌ನಲ್ಲಿ ಪೊಲೀಸ್‌ ಠಾಣೆಯಲ್ಲಿ ಪೊಲೀಸರು  ಯಾತ್ರೆಯ ಮುಖ್ಯ ಸಂಘಟಕರ ವಿರುದ್ಧ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಯಾತ್ರೆಯಲ್ಲಿ ಜನರು ಪಾಲ್ಗೊಳ್ಳುವುದನ್ನು ತಡೆಯಲಾಗುತ್ತಿದೆ. ಆದೂ ರಾಜ್ಯದಲ್ಲಿ ಯಾತ್ರೆ ಪೂರ್ಣಗೊಳಿಸುವುದನ್ನು ತಡೆಯಲು ಯಾವುದೇ ಶಕ್ತಿಗೆ  ಸಾಧ್ಯವಿಲ್ಲ
ಜೈ ರಾಮ್ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಬುಡಕಟ್ಟು ಜನರ ಅಭಿವೃದ್ಧಿ ಬಯಸದ ಬಿಜೆಪಿ: ರಾಹುಲ್‌

ಬುಡಕಟ್ಟು ಜನರು ಅರಣ್ಯಕ್ಕೆ ಸೀಮಿತರಾಗುವುದನ್ನು  ಮತ್ತು  ಅವರು ಶಿಕ್ಷಣ ಹಾಗೂ ಇತರ ಅವಕಾಶಗಳಿಂದ ವಂಚಿತರಾಗುವುದನ್ನು ಮಾತ್ರ ಬಿಜೆಪಿ ಬಯಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದರು. ಅಸ್ಸಾಂನಲ್ಲಿ ಭಾರತ್‌ ಜೋಡೊ ನ್ಯಾಯ ಯಾತ್ರೆಯ ಎರಡನೇ ದಿನದಂದು ಬುಡಕಟ್ಟು ಜನರೇ ಹೆಚ್ಚಾಗಿರುವ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಬುಡಕಟ್ಟು ಜನರ ಮಕ್ಕಳು ಶಾಲೆಗೆ ವಿಶ್ವವಿದ್ಯಾಲಯಕ್ಕೆ ಹೋಗುವ ಇಂಗ್ಲಿಷ್‌ ಕಲಿಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಲು ಬಿಜೆಪಿ ಬಯಸುತ್ತದೆ ಎಂದು ದೂರಿದರು. ‘ನಿಮ್ಮದನ್ನು ನಿಮಗೆ ಮರಳಿಸಬೇಕೆಂದು ನಾವು ಹೇಳುತ್ತೇವೆ. ನಿಮ್ಮ ನೀರು ಭೂಮಿ ಮತ್ತು ಅರಣ್ಯ ನಿಮ್ಮದು’ ಎಂದು ಹೇಳಿದರು. ’ನಿಮಗೆ ಏನಾಗುತ್ತಿದೆ ಎಂಬ ಬಗ್ಗೆ ನಿಮಗೆ ಅರಿವಿದೆ. ನಿಮ್ಮ ಭೂಮಿಯನ್ನು ಕಸಿದುಕೊಳ್ಳಲಾಗಿದೆ ನಿಮ್ಮ ಇತಿಹಾಸ ನಾಶವಾಗಿದೆ. ಇದು ದೇಶದಾದ್ಯಂತ ನಡೆಯುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.