ADVERTISEMENT

BJP ಅಧಿಕಾರ ಬಯಸುತ್ತಿರೋದು ಜನಸೇವೆಗಾಗಿ ಅಲ್ಲ, AAP ಯೋಜನೆ ತಡೆಯಲು: ಕೇಜ್ರಿವಾಲ್

ಪಿಟಿಐ
Published 20 ಅಕ್ಟೋಬರ್ 2024, 4:21 IST
Last Updated 20 ಅಕ್ಟೋಬರ್ 2024, 4:21 IST
<div class="paragraphs"><p>ಅರವಿಂದ ಕೇಜ್ರಿವಾಲ್ </p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ಬಿಜೆಪಿಯು ದೆಹಲಿಯಲ್ಲಿ ಅಧಿಕಾರಕ್ಕೇರಲು ಬಯಸುತ್ತಿರುವುದು ಜನರ ಕೆಲಸಗಳನ್ನು ಮಾಡುವುದಕ್ಕಾಗಿ ಅಲ್ಲ. ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ನಿಲ್ಲಿಸುವುದಕ್ಕಾಗಿ ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.

ADVERTISEMENT

ಪಿತಾಂಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಆಂತರಿಕ ಕಲಹವು ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲಿಗೆ ಕಾರಣವಾಗಬಹುದು ಎಂದು ಎಚ್ಚರಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

'ಚುನಾವಣಾ ಕಣದಲ್ಲಿ ಯಾರಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ, ಎಲ್ಲ 70 ಕ್ಷೇತ್ರಗಳಲ್ಲಿಯೂ ಕೇಜ್ರಿವಾಲ್‌ ಹೋರಾಟ ನಡೆಸುತ್ತಾರೆ. ಶಾಸಕರಾಗಿ ಯಾರೇ ಚುನಾಯಿತರಾದರೂ ನಾನು ನಿಮ್ಮ ಕೆಲಸಗಳನ್ನು ಮಾಡುತ್ತೇನೆ' ಎಂದು ಭರವಸೆ ನೀಡಿದ್ದಾರೆ.

ಬಿಜೆಪಿ ಅಧಿಕಾರಕ್ಕೇರಿದರೆ, ಜನರಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್, ನೀರು, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ನಿಲ್ಲಿಸಲಿದೆ ಎಂದು ಆರೋಪಿಸಿದ್ದಾರೆ.

'ಎಎಪಿ ಅಧಿಕಾರಕ್ಕೇರುವುದಿಲ್ಲ ಎಂಬುದು ನನ್ನ ಚಿಂತೆಯಲ್ಲ. ಒಂದುವೇಳೆ ಎಎಪಿ ಗೆಲ್ಲದಿದ್ದರೆ, ಸರ್ಕಾರಿ ಶಾಲೆಗಳ ಸ್ಥಿತಿ ಏನಾಗಬಹುದು, ವಿದ್ಯುತ್‌ ಮತ್ತು ನೀರಿನ ದರಗಳು ಏರಿಕೆಯಾಗಲಿವೆ ಎಂಬುದು ನನ್ನನ್ನು ಕಾಡುತ್ತಿದೆ' ಎಂದು ಇದೇ ವೇಳೆ ಹೇಳಿದ್ದಾರೆ.

ಈ ಆರೋಪಗಳಿಗೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ತಿರುಗೇಟು ನೀಡಿದ್ದಾರೆ. ಎಎಪಿಯ ಭವಿಷ್ಯಕ್ಕೆ ತೆರೆಬಿದ್ದಿದೆ. 2025ರ ಫೆಬ್ರುವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ದೆಹಲಿ ಜನರು ಎಎಪಿಯನ್ನು ತೊಡೆದುಹಾಕಲಿದ್ದಾರೆ ಎಂದು ಕುಟುಕಿದ್ದಾರೆ.

'ಅರಾಜಕತೆಯಲ್ಲಿ ತೊಡಗಿರುವ ಭ್ರಷ್ಟ ಎಎಪಿ ಸರ್ಕಾರವನ್ನು ತಿರಸ್ಕರಿಸಲು ದೆಹಲಿಯ ಜನರು ಮನಸ್ಸು ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಹರಿಯಾಣ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ, ಎಎಪಿಯು 90 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿತ್ತು. ಅಲ್ಲಿನ ಎಎಪಿ ಅಭ್ಯರ್ಥಿಗಳ ಸೋತಿರುವುದು, ಕೇಜ್ರಿವಾಲ್ ಅವರೇ ಸೋತಂತೆ ಎಂದು ವ್ಯಾಖ್ಯಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.