ದಿಬ್ರುಗಢ, ಅಸ್ಸಾಂ (ಪಿಟಿಐ): ‘ಲೋಕಸಭೆಗೆ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಮರಳಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷ ಇಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಈಶಾನ್ಯ ರಾಜ್ಯಗಳಲ್ಲಿರುವ 14 ಕ್ಷೇತ್ರಗಳ ಪೈಕಿ ಕನಿಷ್ಠ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈಶಾನ್ಯ ರಾಜ್ಯಗಳನ್ನು ಕಾಂಗ್ರೆಸ್‌ನ ಕೋಟೆ ಎಂದು ಎನ್ನಲಾಗುತ್ತಿತ್ತು. ಆದರೆ, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ನಂತರವೂ ಇಲ್ಲಿ ಉತ್ತಮ ಸಾಧನೆ ತೋರಲು ಕಾಂಗ್ರೆಸ್ ವಿಫಲವಾಯಿತು ಎಂದರು.
ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ವಿಧಾನಸಭೆಗಳಿಗೆ ನಡೆದ ಚುನಾವಣೆ ಬಳಿಕ ಬಿಜೆಪಿ ತ್ರಿಪುರಾದಲ್ಲಿ ಸ್ವಂತಬಲದಿಂದ ಹಾಗೂ ಇತರೆ ಎರಡು ರಾಜ್ಯಗಳಲ್ಲಿ ಮೈತ್ರಿಪಕ್ಷಗಳ ಜೊತೆಗೂಡಿ ಸರ್ಕಾರವನ್ನು ರಚಿಸಿತು ಎಂದು ಉಲ್ಲೇಖಿಸಿದರು.
ಲಂಡನ್‌ಗೆ ತೆರಳಿದ್ದಾಗ ರಾಹುಲ್‌ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಶಾ, ‘ವಿದೇಶಿ ನೆಲದಲ್ಲಿ ನಿಂತು ರಾಹುಲ್‌ಗಾಂಧಿ ಭಾರತಕ್ಕೆ ಅವಮಾನಿಸಿದ್ದಾರೆ. ಹೀಗೆಯೇ ಮುಂದುವರಿದರೆ ಈಶಾನ್ಯ ರಾಜ್ಯಗಳಲ್ಲಿ ಅಷ್ಟೇ ಅಲ್ಲ, ಇಡೀ ದೇಶದಿಂದಲೇ ಕಾಂಗ್ರೆಸ್ ನಾಪತ್ತೆಯಾಗಲಿದೆ’ ಎಂದು ಎಚ್ಚರಿಸಿದರು. ‘ಕಾಂಗ್ರೆಸ್‌ನವರು ಪ್ರಧಾನಿ ಮೋದಿ ಅವರಿಗೆ ಟೀಕಿಸಿದಷ್ಟೂ, ಬಿಜೆಪಿ ಇನ್ನಷ್ಟು ಬೆಳೆಯುತ್ತದೆ‘ ಎಂದು ಹೇಳಿದರು.
ಅಸ್ಸಾಂನ ಶೇ 70ರಷ್ಟು ಭಾಗದಲ್ಲಿ ವಿವಾದಿತ ಸೇನಾಪಡೆಗಳ (ವಿಶೇಷಾಧಿಕಾರ) ಕಾಯ್ದೆ 1958 ಅಥವಾ ಆಫ್‌ಸ್ಪಾ ಅನ್ನು ತೆಗೆಯಲಾಗಿದೆ. ಬೊಡೊಲ್ಯಾಂಡ್, ಕರ್ಬಿ ಅಂಗ್‌ಲಾಂಗ್ ಪ್ರದೇಶಗಳಲ್ಲಿ ಶಾಂತಿ ನೆಲೆಸಿದೆ. ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.