ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಪಲಿತಾಂಶದಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಮತ್ತೊಂದೆಡೆ ತೆಲಂಗಾಣ ರಾಜ್ಯ ಉದಯಕ್ಕೆ ಅವಿರತ ಹೋರಾಟ ನಡೆಸಿದ್ದ ಕೆ.ಸಿ.ಚಂದ್ರಶೇಖರ ರಾವ್ ಅವರ ಬಿಆರ್‌ಎಸ್ ಕೋಟೆಯನ್ನು ಭೇದಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ವಿಧಾನಸಭೆಗೆ ಇತ್ತೀಚೆಗೆ ಮತದಾನ ನಡೆದಿತ್ತು. ಮಿಜೋರಾಂ (ಮತ ಎಣಿಕೆ ಸೋಮವಾರ ನಡೆಯಲಿದೆ) ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳ ಮತ ಎಣಿಕೆ ಕಾರ್ಯ ಭಾನುವಾರ ನಡೆಯಿತು.
ನ. 30ರಂದು ಸಂಜೆ ಪ್ರಕಟಗೊಂಡ ಮತಗಟ್ಟೆ ಸಮೀಕ್ಷಾ ವರದಿಗಳು ಛತ್ತಿಸಗಢ ಹೊರತುಪಡಿಸಿ ಉಳಿದೆಡೆ ಬಹುತೇಕ ನಿಜವಾಗಿವೆ. ಛತ್ತಿಸಗಢದಲ್ಲಿ ಬಿಜೆಪಿ ನಿರೀಕ್ಷೆಯನ್ನೂ ಮೀರಿ ಕಾಂಗ್ರೆಸ್ ಎದುರು ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಕುಟುಂಬಕ್ಕೆ ₹500ರಂತೆ ಅಡುಗೆ ಅನಿಲ ಸಿಲಿಂಡರ್, ಖಾಲಿ ಇರುವ ಒಂದು ಲಕ್ಷ ಹುದ್ದೆ ಭರ್ತಿ ಸೇರಿದಂತೆ ‘ಮೋದಿ ಕಿ ಗ್ಯಾರೆಂಟಿ’ ಎದುರು ಕಾಂಗ್ರೆಸ್‌ನ ಗ್ಯಾರೆಂಟಿ ಅಷ್ಟಾಗಿ ಕೆಲಸ ಮಾಡಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ಸ್ಪಷ್ಟಪಡಿಸಿದೆ.
ಛತ್ತೀಸಗಢ ವಿಧಾನಸಭೆಯ ಒಟ್ಟು 90 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಮ್ಯಾಜಿಕ್ ಸಂಖ್ಯೆ 46 ಅನ್ನು ದಾಟಿದೆ. ಕಾಂಗ್ರೆಸ್–34 ಸ್ಥಾನಗಳಲ್ಲಿ ಮುಂದಿವೆ.
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರ ‘ಲಾಡ್ಲಿ ಬೆಹನಾ’ ಯೋಜನೆ ಜನರನ್ನು ಮತ್ತೆ ಬಿಜೆಪಿ ಆಯ್ಕೆ ಮಾಡುವಂತೆ ಮಾಡಿದೆ.
230 ಸ್ಥಾನಗಳ ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ ನೀಡಿತ್ತು. ಬರಲಿರುವ ಲೋಕಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ದೊಡ್ಡ ರಾಜ್ಯವಾದ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಒಟ್ಟು 2,533 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಕಮಲನಾಥ್ ಕಣದಲ್ಲಿದ್ದ ಪ್ರಮುಖರು. ಇವರೊಂದಿಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ ಪಟೇಲ್ ಹಾಗೂ ಫಗ್ಗನ್ ಸಿಂಗ್ ಕುಲ್ಸೇಟ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಸಂಸದರಾದ ರಾಕೇಶ್ ಸಿಂಗ್, ಗಣೇಶ್ ಸಿಂಗ್, ರಿತಿ ಪಾಠಕ್ ಕಣದಲ್ಲಿದ್ದ ಇತರ ಪ್ರಮುಖರು.
ಮಧ್ಯಪ್ರದೇಶದಲ್ಲಿ ಬಿಜೆಪಿ 166 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ ಹಾಗೂ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತನ್ನ ಚೊಚ್ಚಲ ಗೆಲುವು ದಾಖಲಿಸಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ತೀವ್ರ ಪೈಪೋಟಿಯ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ರಾಜಸ್ಥಾನ ಅತಿ ಹೆಚ್ಚು ಸುದ್ದಿಯಲ್ಲಿತ್ತು. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯ ಸಫಲತೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್‌ನ ಗೆಲುವಿನ ವಿಶ್ವಾಸಕ್ಕೆ ಗುಜರಾತ್‌ನ ಜೋಡಿ ತಣ್ಣೀರೆರಚಿದೆ.
ಒಂದು ಕೋಟಿ ಕುಟುಂಬಗಳಿಗೆ ₹500ರಂತೆ ಅಡುಗೆ ಅನಿಲ ಸಿಲಿಂಡರ್, ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಹಸುವಿನ ಸೆಗಣಿ ಕೆಜಿಗೆ ₹2ರಂತೆ ಖರೀದಿಯಂತ ಗ್ಯಾರೆಂಟಿ ಘೋಷಣೆಯ ನಡುವೆಯೂ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಗೆಹಲೋತ್ ವಿಫಲರಾದರು. ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಹಾಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಯೂ ಕಾಂಗ್ರೆಸ್ ಸೋಲಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕಳೆದ 25 ವರ್ಷಗಳ ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಮತದಾರರು ಪ್ರತಿ ಚುನಾವಣೆಯಲ್ಲೂ ಬದಲಾಯಿಸುತ್ತಲೇ ಬಂದಿದ್ದಾರೆ. ಅದು 2023ರಲ್ಲೂ ಮುಂದುವರಿದಿದೆ.
ಚುನಾವಣೆ ಘೋಷಣೆ ನಂತರ ಶ್ರೀಗಂಗಾನಗರದ ಕರಣಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ಮೃತಪಟ್ಟಿದ್ದರು. ಹೀಗಾಗಿ ಮತದಾನ ನಡೆದ 199 ಕ್ಷೇತ್ರಗಳಲ್ಲಿ ಬಿಜೆಪಿ 115, ಕಾಂಗ್ರೆಸ್ 69, ಭಾರತ್ ಆದಿವಾಸಿ ಪಕ್ಷ 3, ಸ್ವತಂತ್ರ ಅಭ್ಯರ್ಥಿಗಳು 7, ಬಿಎಸ್‌ಪಿ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಸುದ್ದಿ ಇಡೀ ದೇಶವನ್ನು ವ್ಯಾಪಿಸಿದೆ. ಮತ್ತೊಂದೆಡೆ ಬಿಆರ್‌ಎಸ್ ಕೋಟೆಯನ್ನು ಭೇದಿಸಬೇಕೆಂಬ ಹಂಬಲ ಹೊಂದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ತೆಲಂಗಾಣ ಕಾಂಗ್ರೆಸ್ ಈ ಚುನಾವಣೆ ಎದುರಿಸಿತ್ತು. 'ಕಾಲೇಶ್ವರಂ ಏತ ನೀರಾವರಿ ಯೋಜನೆ ಕುರಿತು ಪ್ರಸ್ತಾಪಿಸಿದರು. ಕಾಲೇಶ್ವರಂ ಯೋಜನೆಯನ್ನು ಸಿಎಂ ಕೆಸಿಆರ್ ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತೆಲಂಗಾಣ ಜನತೆಯಿಂದ ₹ 1 ಲಕ್ಷ ಕೋಟಿ ದೋಚಲಾಗಿದೆ. ಈ ನೀರಾವರಿ ಯೋಜನೆಯಿಂದ ಯಾರಿಗೂ ಪ್ರಯೋಜನವಾಗಿಲ್ಲ. ಕಾಲೇಶ್ವರಂ ಯೋಜನೆ ಬಿಆರ್‌ಎಸ್‌ನ ಎಟಿಎಂ ಎನ್ನುವ ಬದಲು ಕಾಲೇಶ್ವರಂ ಕೆಸಿಆರ್‌ನ ಎಟಿಎಂ ಎಂಬ ನಮ್ಮ ಕಾರ್ಯಕರ್ತರ ಹೇಳಿಕೆ ನಿಜವೇ ಆಗಿದೆ’ ಎಂದು ರಾಹುಲ್ ಗಾಂಧಿ ಗುಡುಗಿದ್ದರು.
ಬಿಜೆಪಿ ಕೂಡಾ ಕಾಲೇಶ್ವರಂ ಯೋಜನೆಯನ್ನೇ ಮುಂದಿಟ್ಟುಕೊಂಡು ಬಿಆರ್‌ಎಸ್ ಸೋಲಿಸುವಂತೆ ಮತದಾರರನ್ನು ಕೋರಿತ್ತು. ಜತೆಗೆ ಈ ಚುನಾವಣೆಯು ಊಳಿಗಮಾನ್ಯ ಪದ್ಧತಿ ಹಾಗೂ ಜನಸಾಮಾನ್ಯರ ಚುನಾವಣೆ ಎಂದೇ ಕರೆಯಲಾಗಿತ್ತು. ಹೀಗಾಗಿ ಬಿಆರ್‌ಎಸ್ ವಿರುದ್ಧ ಎರಡು ರಾಷ್ಟ್ರೀಯ ಪಕ್ಷಗಳು ಮಾಡಿದ ಆರೋಪಕ್ಕೆ ಜನರು ಸೈ ಎಂದಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಕೆಸಿಆರ್‌ಗೆ ತೀವ್ರ ಆಘಾತ ತಂದಿದ್ದಾರೆ.
119 ಸ್ಥಾನಗಳ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 63, ಬಿಆರ್‌ಎಸ್ 40, ಬಿಜೆಪಿ 8, ಎಐಎಂಐಎಂ 7, ಸಿಪಿಐ 1 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಸೋಮವಾರ ನಡೆಯಲಿರುವ ಮಿಜೋರಾಂ ರಾಜ್ಯದ ಮತ ಎಣಿಕೆಯ ಫಲಿತಾಂಶದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.