ADVERTISEMENT

ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ನಾಯಕರ ಕೈವಾಡ ಆರೋಪ

ಪಿಟಿಐ
Published 26 ಏಪ್ರಿಲ್ 2024, 13:29 IST
Last Updated 26 ಏಪ್ರಿಲ್ 2024, 13:29 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಕಂಥಿ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಶುಕ್ರವಾರ 18 ವರ್ಷದ ಬಿಜೆಪಿ ಕಾರ್ಯಕರ್ತನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಮೇನಾ ಪ್ರದೇಶದ ಗೋರಮಹಲ್ ಗ್ರಾಮದ ತೋಟದಲ್ಲಿ ಬಿಜೆಪಿ ಕಾರ್ಯಕರ್ತ ದೀನಬಂಧು ಮಿಡ್ಯಾ ಶವ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಟಿಎಂಸಿ ನಾಯಕರು ಆತನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ದೀನಬಂಧು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಆಡಳಿತಾರೂಢ ಟಿಎಂಸಿ ತಳ್ಳಿಹಾಕಿದೆ.

'ನನ್ನ ಮಗ ಬುಧವಾರದಿಂದ ನಾಪತ್ತೆಯಾಗಿದ್ದಾನೆ. ಕೆಲ ಸಮಯದಿಂದ ಟಿಎಂಸಿಯ ಕೆಲವು ಸದಸ್ಯರು ನಮಗೆ ಬೆದರಿಕೆ ಹಾಕುತ್ತಿದ್ದರು. ಅವರೇ ಕೊಲೆ ಮಾಡಿದ್ದಾರೆ ಎಂದು ನನಗೆ ತಿಳಿದಿದೆ' ಎಂದು ದೀನಬಂಧು ಅವರ ತಾಯಿ ಆರೋಪಿಸಿದ್ದಾರೆ. ಅಲ್ಲದೇ ಸಿಬಿಐ ತನಿಖೆಗೆ ಕೋರಿದ್ದಾರೆ.

ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ದೀನಬಂಧು ಅವರಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಅವರ ಮೊಬೈಲ್ ಲೊಕೇಶನ್ ಸಹಾಯದಿಂದ ಶವ ಪತ್ತೆ ಮಾಡಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಶಾಸಕ ನಾಸಿರುದ್ದೀನ್ ಅಹಮದ್, 'ಬಿಜೆಪಿ ಎಲ್ಲದಕ್ಕೂ ಟಿಎಂಸಿಯನ್ನು ದೂಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ. ಸಾವಿಗೆ ಕಾರಣವೇನು ಎಂದು ತಿಳಿಯುವ ಮೊದಲೇ ಅವರು ನಮ್ಮನ್ನು ದೂರುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.