ADVERTISEMENT

ಬಿಜೆಪಿ ಸಂಸದನ ಪಾದ ತೊಳೆದು, ನೀರು ಸೇವಿಸಿದ ಕಾರ್ಯಕರ್ತ: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 19:01 IST
Last Updated 17 ಸೆಪ್ಟೆಂಬರ್ 2018, 19:01 IST
   

ಗೊದ್ದಾ, ಜಾರ್ಖಂಡ್: ಬಿಜೆಪಿ ಕಾರ್ಯಕರ್ತನೊಬ್ಬ ಜಾರ್ಖಂಡ್‍ನ ಬಿಜೆಪಿ ಸಂಸದನಿಶಿಕಾಂತ್ ದುಬೇ ಅವರ ಪಾದ ತೊಳೆದು, ಈ ನೀರನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದುಬೇ, ಕಾರ್ಯಕರ್ತನಿಗೆ ತನ್ನ ಮೇಲಿರುವ ಅಭಿಮಾನವನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ದುಬೇ ಅವರು ಗೊದ್ದಾದಲ್ಲಿ ಭಾನುವಾರ ರ್‍ಯಾಲಿಯೊಂದನ್ನು ಹಮ್ಮಿಕೊಂಡಿದ್ದರು.ದುಬೇ ಅವರು ಭಾಷಣ ಮುಗಿಸಿದ ಕೂಡಲೇ ಪವನ್ ಎಂಬ ಬಿಜೆಪಿ ಕಾರ್ಯಕರ್ತ ಕಂಚಿನ ಬಟ್ಟಲು ಮತ್ತು ಲೋಟವನ್ನು ತಂದು ದುಬೇ ಕಾಲು ಕೆಳಗೆ ಕುಳಿತಿದ್ದಾನೆ. ನಂತರ ದುಬೇ ಅವರ ಪಾದವನ್ನು ತೊಳೆದು ಬಟ್ಟೆಯಲ್ಲಿ ಒರೆಸಿ ಪಾದ ತೊಳೆದ ನೀರನ್ನು ಕುಡಿದಿದ್ದಾನೆ. ಆಗ ಅಲ್ಲಿ ನೆರಿದಿದ್ದ ಜನರು ಪವನ್ ಭಾಯಿ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

ADVERTISEMENT

ಜಾರ್ಖಂಡ್‍ನಲ್ಲಿ ಈ ರೀತಿ ಪಾದ ಪೂಜೆ ಮಾಡುವುದು ಸರ್ವೇ ಸಾಮಾನ್ಯ.ಮಹಾಭಾರತದಲ್ಲಿ ಶ್ರೀಕೃಷ್ಣ ಸುಧಾಮನಿಗೆ ಇದೇ ರೀತಿ ಮಾಡಿದ್ದ, ಮುಂದೊಂದು ದಿನ ನನಗೆ ಪವನ್ ಪಾದ ತೊಳೆಯುವ ಅವಕಾಶ ಸಿಗಬಹುದು ಎಂದು ದುಬೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.ತಾನು ಸಾರ್ವಜನಿಕರ ಸೇವೆ ಮಾಡುತ್ತಿರುವುದರಿಂದಲೇ ತನಗೆ ಈ ರೀತಿಯ ಅಭಿಮಾನಿಗಳು ಇದ್ದಾರೆ ಎಂದಿದ್ದಾರೆ ದುಬೇ.

ಕಾಂಗ್ರೆಸ್ ಮತ್ತು ಬಿಎಸ್‍ಪಿ ದುಬೇ ಅವರ ಮೇಲೆ ಟೀಕಾ ಪ್ರಹಾರ ಮಾಡಿದ್ದು, ಬಿಜೆಪಿಯವರ ಅಹಂಕಾರದ ಪರಾಕಾಷ್ಠೆ ಇದು ಎಂದಿದ್ದಾರೆ.

ಕ್ಷಮೆ ಕೇಳುವ ಬದಲು ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಶ್ರೀಕೃಷ್ಣನಿಗೆ ತಮ್ಮನ್ನು ಹೋಲಿಸಿಕೊಳ್ಳುವ ಮೂಲಕ ಬಿಜೆಪಿ ತಾವು ದೇವರ ಸ್ಥಾನಕ್ಕೇರಿದ್ದೇವೆ ಎಂದು ಭ್ರಮೆ ಹೊಂದಿದೆ. ಇದೇನಾ ಮೋದಿಜಿ ಮತ್ತು ಅಮಿತ್ ಶಾ ಹೇಳುತ್ತಿರುವ ಸಂಸ್ಕಾರ ಮತ್ತು ಸಂಸ್ಕೃತಿ? ಎಂದು ವಿಪಕ್ಷಗಳು ಕಿಡಿ ಕಾರಿವೆ.

ಬಿಜೆಪಿ ಪಕ್ಷವು ಜಾತಿ ವ್ಯವಸ್ಥೆಯಲ್ಲಿ ಯಾವ ರೀತಿ ನಂಬಿಕೆ ಇರಿಸಿದೆ ಎಂಬುದಕ್ಕೆ ಇದೇ ನಿದರ್ಶನ.ಪಕ್ಷ ಇದೇ ಸಂಪ್ರದಾಯವನ್ನು ಮುಂದುವರಿಸುತ್ತಿರುವುದು ನಾಚಿಕೆಗೇಡು ಎಂದು ಬಿಎಸ್‌‍ಪಿ ನೇತಾರ ಸುಧೀಂದ್ರ ಭದೋರಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.