ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅಲೆ ಇದೀಗ ಮೋದಿ ವಿನಾಶವಾಗಿ ಬದಲಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪಟ್ನಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ರವಿಶಂಕರ್ಪ್ರಸಾದ್ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ಸಿನ್ಹಾ ಪಟ್ನಾದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮಾತನಾಡಿದರು. ‘ಜನರನ್ನು ಸಂಕಷ್ಟಕ್ಕೆ ದೂಡಿದ ಜಿಎಸ್‌ಟಿ, ನೋಟು ರದ್ದತಿ, ಸೇಡಿನ ರಾಜಕೀಯ ತಂತ್ರ ಅನುಸರಿಸಿದ್ದರಿಂದಾಗಿಬಿಜೆಪಿಯು ಈ ಬಾರಿ ಉತ್ತರ ಪ್ರದೇಶ ಸೇರಿದಂತೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮುಖಭಂಗ ಅನುಭವಿಸಲಿದೆ.ಮೋದಿ ವೇವ್(ಅಲೆ) ಈಗ ಮೋದಿ ಕಹರ್(ವಿನಾಶ) ಆಗಿ ಬದಲಾಗಿದೆ’ ಎಂದು ಹೇಳಿದರು.
ಸಚಿವ ಸ್ಥಾನ ನಿರಾಕರಿಸಿದ್ದಕ್ಕೆ ಸಿನ್ಹಾ ನಾಯಕರನ್ನು ಟೀಕಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿರುವ ಸಿನ್ಹಾ, ‘ಬಿಜೆಪಿಯ ಆಂತರಿಕ ಪ್ರಜಾಪ್ರಭುತ್ವವು ಸರ್ವಾಧಿಕಾರ ಮಾದರಿಯಲ್ಲಿ ಬದಲಾಗಿದೆ. ಯಾರು ಪ್ರಬಲರಿಗೆ ಆಪ್ತರಾಗಿ ನಟಿಸುತ್ತಾರೋ ಅವರಷ್ಟೇ ಅಲ್ಲಿ ಬೆಳೆಯುತ್ತಾರೆ’ ಎಂದು ಆರೋಪಿಸಿದರು.
ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ ಜೋಷಿ, ಯಶವಂತ್ ಸಿನ್ಹಾ ಅವರಂತಹ ಅಗ್ರಮಾನ್ಯ ನಾಯಕರನ್ನು ರಾಜಕೀಯ ನಿವೃತ್ತಿ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಕಿಡಿ ಕಾರಿದ ಸಿನ್ಹಾ, ‘ಅದು(ಬಿಜೆಪಿ) ಈಗ ಏಕವ್ಯಕ್ತಿ ಪ್ರದರ್ಶನವಾಗಿ ಬದಲಾಗಿದೆ ಮತ್ತು ಅಲ್ಲಿರುವುದು ಕೇವಲ ಇಬ್ಬರ ಸೈನ್ಯ’ ಎಂದು ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುರಿತು ವ್ಯಂಗ್ಯವಾಡಿದರು.
‘ಮೋದಿ ಸರ್ಕಾರವು ರೈತರು, ವಿದ್ಯಾರ್ಥಿಗಳು, ಬಡವರು ಸೇರಿಂದತೆ ಎಲ್ಲ ವರ್ಗದ ಜನರನ್ನೂ ನಿರಾಶೆಗೊಳಿಸಿದೆ. ಈ ಬಾರಿ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಎನ್‌ಡಿಎ 100 ಸ್ಥಾನಗಳಿಗೆ ಕುಸಿಯಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಸುಬೋಧ್ ಕಾಂತ್ ಸಹಯ್ ಹೇಳಿದರು. ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಜೈಲು ಸೇರಬೇಕಾಯಿತು ಎಂದೂ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.