ADVERTISEMENT

ಶಶಿ ಕಚೇರಿಗೆ ಮಸಿ ಬಳಿದ ಬಿಜೆಪಿ ಯುವ ಮೋರ್ಚಾ

ಪಿಟಿಐ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
ಶಶಿ ತರೂರ್‌
ಶಶಿ ತರೂರ್‌   

ತಿರುವನಂತಪುರ : ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತವು ‘ಹಿಂದೂ ಪಾಕಿಸ್ತಾನ’ವಾಗಲಿದೆ ಎಂದು ಹೇಳಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ತಿರುವನಂತಪುರ ಕಚೇರಿಗೆ ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರು ಮಸಿ ಬಳಿದಿದ್ದಾರೆ.

ಕಚೇರಿಯ ಗೋಡೆ ಮತ್ತು ಗೇಟುಗಳಿಗೆ ಕಪ್ಪು ಬಣ್ಣ ಹಚ್ಚಿದ್ದಾರೆ. ಕಚೇರಿಯ ಮುಂದೆ ‘ಪಾಕಿಸ್ತಾನ ಕಚೇರಿ’ ಎಂಬ ಫಲಕ ಇರಿಸಿದ್ದಾರೆ. ತರೂರ್‌ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. ತರೂರ್‌ ಅವರು ಪ್ರತಿಭಟನೆಯ ಸಂದರ್ಭದಲ್ಲಿ ಕಚೇರಿಯಲ್ಲಿ ಇರಲಿಲ್ಲ.

‘ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನನ್ನ ಕ್ಷೇತ್ರದ ಕಚೇರಿಯಲ್ಲಿ ದಾಂದಲೆ ನಡೆಸಿದ್ದಾರೆ. ಮನವಿ ನೀಡುವುದಕ್ಕಾಗಿ ಬಂದು ಕಚೇರಿಯಲ್ಲಿ ಕಾಯುತ್ತಿದ್ದ ಅಮಾಯಕ ಜನರನ್ನು ಓಡಿಸಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಘೋಷಣೆ ಕೂಗಿದ್ದಾರೆ’ ಎಂದು ತರೂರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ನಮಗೆಲ್ಲಾ ಎಚ್ಚರಿಕೆ ನೀಡಲಾಗಿದೆ. ಹಿಂದೂ ರಾಷ್ಟ್ರದ ಕನಸನ್ನು ಬಿಟ್ಟಿದ್ದೀರಾ ಎಂಬ ಸರಳ ಪ್ರಶ್ನೆಗೆ ದಾಂದಲೆ ಮತ್ತು ಹಿಂಸೆಯೇ ಬಿಜೆಪಿಯ ಉತ್ತರವಾಗಿದೆ. ಅದನ್ನೇ ಅವರು ತಿರುವನಂತಪುರದಲ್ಲಿ ತೋರಿಸಿದ್ದಾರೆ. ಸಂಘಿ ಗೂಂಡಾಗಳು ನಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೆಚ್ಚಿನ ಹಿಂದೂಗಳು ಹೇಳುತ್ತಿದ್ದಾರೆ’ ಎಂದು ತರೂರ್‌ ಹೇಳಿದ್ದಾರೆ.

ಬಿಜೆವೈಎಂ ರಾಜ್ಯ ಘಟಕದ ಉಪಾಧ್ಯಕ್ಷ ರಂಜಿತ್‌ ಚಂದ್ರನ್‌ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನದ ಬಗ್ಗೆ ತರೂರ್‌ಗೆ ಮೃದು ಧೋರಣೆ ಇದೆ ಎಂದು ಅವರು ಆರೋಪಿಸಿದ್ದಾರೆ.

‘ರಾಜಕೀಯ ಲಾಭಕ್ಕಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ತಿರುವನಂತಪುರದ ಸಂಸದ ಸ್ಥಾನದಲ್ಲಿರುವ ಅವರು ಇಂತಹ ಹೇಳಿಕೆ ನೀಡಬಾರದಿತ್ತು. ಹೇಳಿಕೆಯು ಕೋಮು ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಹಾಗಾಗಿ ತಕ್ಷಣವೇ ಹೇಳಿಕೆಯನ್ನು ವಾಪಸ್‌ ಪಡೆಯಬೇಕು’ ಎಂದು ಚಂದ್ರನ್‌ ಒತ್ತಾಯಿಸಿದ್ದಾರೆ.

ಪ್ರತಿಭಟನೆ ಮುಂದುವರಿಯಲಿದೆ ಎಂದೂ ಅವರು ತಿಳಿಸಿದ್ದಾರೆ.
**

ನನ್ನನ್ನು ಕೊಲ್ಲುವುದಾಗಿ ಮತ್ತು ಕಚೇರಿಯನ್ನು ಮುಚ್ಚುವುದಾಗಿ ಅವರು ಬೆದರಿಸಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ.
-ಶಶಿ ತರೂರ್‌, ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.