ADVERTISEMENT

ಉತ್ತರ ಪ್ರದೇಶ: ಬಿಜೆಪಿ ಮಾಜಿ ಶಾಸಕ, ಇತರ ಐವರಿಗೆ 7 ವರ್ಷ ಜೈಲು

2012ರ ವಿಧ್ವಂಸಕ ಕೃತ್ಯ ಪ್ರಕರಣ

ಪಿಟಿಐ
Published 20 ಜೂನ್ 2024, 14:49 IST
Last Updated 20 ಜೂನ್ 2024, 14:49 IST
   

ರಾಂಪುರ(ಉತ್ತರ ಪ್ರದೇಶ): 12 ವರ್ಷದ ಹಿಂದಿನ ಪ್ರಕರಣವೊಂದರಲ್ಲಿ ಬಿಜೆಪಿಯ ಮಾಜಿ ಶಾಸಕ ಕಾಶಿರಾಮ್ ದಿವಾಕರ ಹಾಗೂ ಇತರ ಐದು ಜನರಿಗೆ ಇಲ್ಲಿನ ಸಂಸದರ–ಶಾಸಕರ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹1.01 ಲಕ್ಷ ದಂಡ ವಿಧಿಸಿ ಗುರುವಾರ ಆದೇಶಿಸಿದೆ.

ಪ್ರಕರಣದಲ್ಲಿ ಎಲ್ಲ ಆರು ಜನರು ತಪ್ಪಿತಸ್ಥರು ಎಂದು ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್‌ ಬುಧವಾರ ಹೇಳಿದ್ದರು.

ಕೃಷ್ಣಪಾಲ್, ಭರತ್, ಸಂಜು ಯಾದವ್, ಮೇಘರಾಜ್ ಹಾಗೂ ಸುರೇಶ ಗುಪ್ತಾ ಶಿಕ್ಷೆಗೆ ಒಳಗಾದವರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಇತರ 21 ಜನರನ್ನು ಖುಲಾಸೆಗೊಳಿಸಿದೆ.

ADVERTISEMENT

ಕಾಶಿರಾಮ್‌ ದಿವಾಕರ ನೇತೃತ್ವದಲ್ಲಿ ಕೆಲ ಜನರು ಶಹಬಾದ್‌ನಲ್ಲಿರುವ ರಾಣಾ ಸಕ್ಕರೆ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದರು. ಕಾರ್ಖಾನೆಯ ಆವರಣದಲ್ಲಿದ್ದ ಟ್ರ್ಯಾಕ್ಟರ್‌ನ ಟ್ರಾಲಿಯನ್ನು ಹೊರಗೆ ತೆಗೆದುಕೊಂಡು ಹೋಗುವ ವಿಚಾರವಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದ ಕಾಶಿರಾಮ್‌ ಹಾಗೂ ಅವರ ಬೆಂಬಲಿಗರು ಕಾರ್ಖಾನೆಯನ್ನು ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಈ ಕುರಿತು ಕಾರ್ಖಾನೆ ಅಧ್ಯಕ್ಷ ಓಂವೀರ್ ಸಿಂಗ್‌ ಅವರು  2012ರ ಜನವರಿ 16ರಂದು ಪ್ರಕರಣ ದಾಖಲಿಸಿದ್ದರು.

ಈ ಘಟನೆಯಲ್ಲಿ ಕೆಲ ಕಾರ್ಮಿಕರು ಸಹ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಕಾಶಿರಾಮ್‌ ಹಾಗೂ ಇತರರ ವಿರುದ್ಧ ಶಹಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.