ADVERTISEMENT

ಆರ್‌ಎಸ್‌ಎಸ್ ಸದಸ್ಯನ ವಿರುದ್ಧ ₹ 10 ಕೋಟಿ ಮೊಕದ್ದಮೆ ದಾಖಲಿಸಿದ ಬಿಜೆಪಿ ನಾಯಕ

ಲೈಂಗಿಕ ದೌರ್ಜನ್ಯ ಆರೋಪ

ಏಜೆನ್ಸೀಸ್
Published 10 ಜೂನ್ 2024, 10:38 IST
Last Updated 10 ಜೂನ್ 2024, 10:38 IST
<div class="paragraphs"><p>ಅಮಿತ್ ಮಾಳವೀಯ</p></div>

ಅಮಿತ್ ಮಾಳವೀಯ

   

ಚಿತ್ರ ಕೃಪೆ: X / Twitter

ನವದೆಹಲಿ: ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಆರ್‌ಎಸ್‌ಎಸ್‌ ಸದಸ್ಯ ಶಾಂತನು ಸಿನ್ಹಾ ವಿರುದ್ಧ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ₹ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ 'ಸುಳ್ಳು ಹಾಗೂ ಅವಹೇಳನಕಾರಿ' ಪೋಸ್ಟ್‌ ಅನ್ನು ತೆಗೆದುಹಾಕಬೇಕು ಎಂದು ಸಿನ್ಹಾ ಅವರಿಗೆ ನೋಟಿಸ್‌ ಕಳುಹಿಸಿದ್ದಾರೆ.

'ನನ್ನ ವಿರುದ್ಧ ಮಾಡಲಾಗಿರುವ ಆರೋಪವು ಅತ್ಯಂತ ಅಪಮಾನಕರವಾಗಿದೆ. ನಾನು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದೇನೆ ಎಂಬುದು ಸುಳ್ಳು. ಸಾರ್ವಜನಿಕ ವ್ಯಕ್ತಿತ್ವವುಳ್ಳ ಆ ಮಹಿಳೆಯ ಘನತೆಗೂ ಈ ಆರೋಪರಿಂದ ಧಕ್ಕೆಯಾಗಿದೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮಾಳವೀಯ ಅವರು ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಿನ್ಹಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಈ ಆರೋಪದ ಬೆನ್ನಲ್ಲೇ ಮಾಳವೀಯ ವಿರುದ್ಧ ಗುಡುಗಿರುವ ಕಾಂಗ್ರೆಸ್‌, ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೆತ್, 'ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್‌ ಮಾಳವೀಯ ನೀಚ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೂ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರ್‌ಎಸ್‌ಎಸ್‌ ಸದಸ್ಯ ಶಾಂತನು ಸಿನ್ಹಾ ಆರೋಪಿಸಿದ್ದಾರೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಮಾಳವೀಯ ನೀಚ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ರಾಹುಲ್‌ ಸಿನ್ಹಾ ಅವರ ಸಂಬಂಧಿ ಆರ್‌ಎಸ್‌ಎಸ್‌ನ ಶಾಂತನು ಸಿನ್ಹಾ ಆರೋಪಿಸಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ 24 ಗಂಟೆ ಕಳೆಯುವುದರೊಳಗೆ, ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಆಘಾತಕಾರಿ. ಮಾಳವೀಯ ಅವರನ್ನು ಕೂಡಲೇ ಪಕ್ಷದ ಅಧಿಕಾರದಿಂದ ಕಿತ್ತುಹಾಕಬೇಕು. ಆರೋಪದ ಸಂಬಂಧ ಸ್ವತಂತ್ರ ತನಿಖೆ ನಡೆಯಬೇಕು' ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.