ADVERTISEMENT

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಬಂಧನ

ಪಿಟಿಐ
Published 20 ಸೆಪ್ಟೆಂಬರ್ 2019, 17:18 IST
Last Updated 20 ಸೆಪ್ಟೆಂಬರ್ 2019, 17:18 IST
ಸ್ವಾಮಿ ಚಿನ್ಮಯಾನಂದ ಅವರನ್ನು ಉತ್ತರಪ್ರದೇಶ ಎಸ್‌ಐಟಿ ತಂಡದವರು ಬಂಧಿಸಿ ಕರೆದೊಯ್ದರು –ಪಿಟಿಐ ಚಿತ್ರ
ಸ್ವಾಮಿ ಚಿನ್ಮಯಾನಂದ ಅವರನ್ನು ಉತ್ತರಪ್ರದೇಶ ಎಸ್‌ಐಟಿ ತಂಡದವರು ಬಂಧಿಸಿ ಕರೆದೊಯ್ದರು –ಪಿಟಿಐ ಚಿತ್ರ   

ಶಹಜಹಾನ್‌ಪುರ: ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

‘ಉತ್ತರಪ್ರದೇಶ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡದವರು (ಎಸ್‌ಐಟಿ) ಶಹಜಹಾನ್‌ಪುರದಲ್ಲಿರುವ ಚಿನ್ಮಯಾನಂದ ಅವರ ಆಶ್ರಮದಿಂದ ಅವರನ್ನು ಶುಕ್ರವಾರ ಬೆಳಿಗ್ಗೆ 8.50ಕ್ಕೆ ಬಂಧಿಸಿದರು. ಬಳಿಕ ಅವರ ಆರೋಗ್ಯ ತಪಾಸಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಅವರನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ’ ಎಂದು ಡಿಜಿಪಿ ಒ.ಪಿ. ಸಿಂಗ್‌ ತಿಳಿಸಿದ್ದಾರೆ.

ಇದನ್ನೂ ಓದಿ:‘ಆರೋಪಿಸಿದವರು ವಿಷಕನ್ಯೆಯರು’

ADVERTISEMENT

ಚಿನ್ಮಯಾನಂದ ಅವರಿಗೆ ಬೆದರಿಕೆ ಹಾಕಿ, ಅವರಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇತರ ಮೂವರನ್ನು ಬಂಧಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್‌ 376ರ ಬದಲು, ‘376ಸಿ’ ಅಡಿ ಚಿನ್ಮಯಾನಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ತಮ್ಮ ಹುದ್ದೆ ಅಥವಾ ಸ್ಥಾನದ ದುರುಪಯೋಗ ಮಾಡಿ, ತಮ್ಮ ಅಧೀನದ ಮಹಿಳೆಯನ್ನು ಲೈಂಗಿಕ ಸಂಪರ್ಕಕ್ಕೆ ಬಳಸಿಕೊಂಡವರ ವಿರುದ್ಧ ಈ ಸೆಕ್ಷನ್‌ ಅಡಿ ದೂರು ದಾಖಲಿಸಲಾಗುತ್ತದೆ.

ಅತ್ಯಾಚಾರ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಆವಕಾಶ ಇರುತ್ತದೆ. ಆದರೆ 376ಸಿ ಅಡಿ ದಾಖಲಾದ ಆರೋಪ ಸಾಬೀತಾದರೆ ಐದರಿಂದ 10 ವರ್ಷಗಳ ಜೈಲು ಶಿಕ್ಷೆಗೆ ಮಾತ್ರ ಅವಕಾಶ ಇರುತ್ತದೆ.

‘ಬಂಧನದ ನೋಟಿಸ್‌ ಮೇಲೆ ಚಿನ್ಮಯಾನಂದ ಅವರ ಸಂಬಂಧಿಕರ ಸಹಿ ಪಡೆಯಲಾಗಿದೆ. ಆದರೆ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಪೊಲೀಸರು ಯಾರಿಗೂ ನೀಡಿಲ್ಲ’ ಎಂದು ಅವರ ವಕೀಲರಾದ ಪೂಜಾ ಸಿಂಗ್‌ ಹೇಳಿದ್ದಾರೆ.

ಚಿನ್ಮಯಾನಂದ ಅವರು ತಮ್ಮ ಮೇಲೆ ಸುಮಾರು ಒಂದು ವರ್ಷದ ಕಾಲ ಅತ್ಯಾಚಾರ ನಡೆಸಿದ್ದಾರೆ ಎಂದು
ಚಿನ್ಮಯಾನಂದ ಅವರ ನೇತೃತ್ವದ ಸಂಸ್ಥೆಯು ನಡೆಸುವ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಸುಮಾರು ಒಂದು ತಿಂಗಳ ಹಿಂದೆ ಆರೋಪ ಮಾಡಿದ್ದರು. ಈ ದೂರಿನ ಆಧಾರದಲ್ಲಿ, ಪ್ರಕರಣದ ಬಗ್ಗೆ ಎಸ್‌ಐಟಿ ಮೂಲಕ ತನಿಖೆ ನಡೆಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ತಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯು ಪೊಲೀಸರಿಗೆ 43 ವಿಡಿಯೊ ತುಣುಕುಗಳನ್ನು ನೀಡಿದ್ದರು. ಚಿನ್ಮಯಾನಂದ ಅವರನ್ನು ಬಂಧಿಸದಿದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಬೆದರಿಕೆಯನ್ನೂ ಹಾಕಿದ್ದರು.

‘ತನಿಖೆಯಲ್ಲಿ ಯಾವುದೇ ವಿಳಂಬ ಆಗಿಲ್ಲ. ಎಸ್‌ಐಟಿ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದೆ. ತಮ್ಮ ಹೇಳಿಕೆಯನ್ನು ದಾಖಲಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯು ನೀಡಿರುವ ವಿಡಿಯೊಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದಾದ ನಂತರವೇ ಚಿನ್ಮಯಾನಂದ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ’ ಎಂದು ಡಿಜಿಪಿ ತಿಳಿಸಿದರು.

*
ಸೆಕ್ಷನ್‌ 376ಸಿ ಅಡಿ ಅವರನ್ನು ಬಂಧಿಸುವ ಮೂಲಕ ಅಧಿಕಾರಿಗಳು ಪ್ರಕರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
-ಚಿನ್ಮಯಾನಂದ ವಿರುದ್ಧ ಆರೋಪ ಮಾಡಿರುವ ವಿದ್ಯಾರ್ಥಿನಿ

*
ವಿದ್ಯಾರ್ಥಿನಿಯು ಮಸಾಜ್‌ ಮಾಡಿದ ವಿಡಿಯೊ ನೈಜ ಎಂದು ಸ್ವಾಮಿ ಚಿನ್ಮಯಾನಂದ ಒಪ್ಪಿದ್ದಾರೆ. ಈ ಘಟನೆಗೆ ಅವರು ಕ್ಷಮೆಯಾಚಿಸಿದ್ದಾರೆ.
-ನವೀನ್‌ ಅರೋರಾ, ಐ.ಜಿ, ಎಸ್‌ಐಟಿ

*
ಈಗ ಎಲ್ಲವೂ ನಿಮಗೆ ತಿಳಿದಿರುವುದರಿಂದ, ನಾನು ಹೇಳುವುದೇನೂ ಉಳಿದಿಲ್ಲ. ನಾನು ತಪ್ಪನ್ನು ಒಪ್ಪಿಕೊಂಡಿದ್ದೇನೆ. ಆ ಕೃತ್ಯಕ್ಕಾಗಿ ಕ್ಷಮೆ ಯಾಚಿಸುತ್ತೇನೆ.
-ಸ್ವಾಮಿ ಚಿನ್ಮಯಾನಂದ, ಆರೋಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.