ಮುಂಬೈ: ‘ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ವಿಚಾರವಾಗಿ ಬಿಜೆಪಿಯು ನೀಡಿರುವ ಹೇಳಿಕೆಯು ಆ ಪಕ್ಷ ಶಾಸಕರ ಖರೀದಿಯಲ್ಲಿ ತೊಡಗಿದೆ ಎಂಬುದಕ್ಕೆ ಪುರಾವೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಆರೋಪಿಸಲಾಗಿದೆ.
ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ ಸರ್ಕಾರ 6 ತಿಂಗಳಿಗಿಂತ ಹೆಚ್ಚು ಬಾಳುವುದಿಲ್ಲ ಎಂಬ ದೇವೇಂದ್ರ ಫಡಣವೀಸ್ ಹೇಳಿಕೆಗೆ ತಿರುಗೇಟು ನೀಡಿರುವ ಸೇನಾ, ‘ಹೊಸ ರಾಜಕೀಯ ಸಮೀಕರಣವು ಹಲವರಿಗೆ ಹೊಟ್ಟೆನೋವು ತರಿಸಿದೆ’ ಎಂದಿದೆ.
119 ಶಾಸಕರ ಬೆಂಬಲವಿದ್ದು, ಸದ್ಯದಲ್ಲೇ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಗೆ ಸೇನಾ ತಿರುಗೇಟು ನೀಡಿದೆ. ‘105 ಸೀಟು ಹೊಂದಿರುವ ಪಕ್ಷದವರು ಬಹುಮತ ಇಲ್ಲದ ಕಾರಣ ಸರ್ಕಾರ ರಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದರು. ಈಗ ತಮ್ಮಿಂದ ಮಾತ್ರ ಸರ್ಕಾರ ರಚನೆ ಸಾಧ್ಯ ಎಂದುಅವರೇ ಹೇಗೆ ಹೇಳುತ್ತಿದ್ದಾರೆ’ ಎಂದು ಪ್ರಶ್ನಿಸಿದೆ.
‘ಶಾಸಕರ ಖರೀದಿ ಉದ್ದೇಶ ಇಲ್ಲಿ ಎದ್ದುಕಾಣುತ್ತಿದೆ. ಪಾರದರ್ಶಕ ಆಡಳಿತದ ವಾಗ್ದಾನ ನೀಡಿದ್ದವರ ಸುಳ್ಳುಗಳು ಈಗ ಬಯಲಾಗುತ್ತಿವೆ’ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಭೇಟಿ ಮುಂದೂಡಿಕೆ ಸಾಧ್ಯತೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಡುವೆದೆಹಲಿಯಲ್ಲಿ ಭಾನುವಾರ ನಿಗದಿಯಾಗಿದ್ದ ಸಭೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಪುಣೆಯಲ್ಲಿ ಭಾನುವಾರ ಸಂಜೆ ಎನ್‌ಸಿಪಿ ಕೋರ್ ಕಮಿಟಿ ಸಭೆ ಆಯೋಜನೆಯಾಗಿದ್ದು, ಪವಾರ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.