ADVERTISEMENT

‘ಮಹಾ‘ ಬಂಡಾಯ: ಬಹುಮತ ಸಾಬೀತಿಗೆ ಸಿಎಂ ಉದ್ಧವ್‌ ಠಾಕ್ರೆಗೆ ಸೂಚಿಸಲು ಬಿಜೆಪಿ ಮನವಿ

ಶಾ, ನಡ್ಡಾ ಜತೆ ಫಡಣವೀಸ್‌ ಚರ್ಚೆ: ರಾಜ್ಯಪಾಲರ ಭೇಟಿ

ಪಿಟಿಐ
Published 29 ಜೂನ್ 2022, 1:51 IST
Last Updated 29 ಜೂನ್ 2022, 1:51 IST
   

ಮುಂಬೈ: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಸೂಚಿಸುವಂತೆ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ದೆಹಲಿಯಿಂದ ಹಿಂದಿರುಗಿದ ನಂತರ ರಾಜಭವನಕ್ಕೆ ತೆರಳಿದ ಅವರು, ಈ ಸಂಬಂಧ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಮಹಾರಾಷ್ಟ್ರದ ಬಿಜೆಪಿಯ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಪಕ್ಷದ ಮುಖಂಡರಾದ ಸುಧೀರ್‌ ಮುಂಗಂಟಿವಾರ, ಪ್ರವೀಣ ದರೇಕರ್, ಗಿರೀಶ ಮಹಾಜನ್ ಹಾಗೂ ಆಶೀಶ್ ಶೇಲಾರ್ ಇದ್ದರು.

ಇನ್ನೊಂದೆಡೆ, ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಬಂಡಾಯ ಶಾಸಕರಿಗೆ ಭಾವನಾತ್ಮಕ ಮನವಿ ಮಾಡಿ, ಇನ್ನೂ ಕಾಲ ಮಿಂಚಿಲ್ಲ ಬಂದು ತಮ್ಮಲ್ಲಿ ಮಾತನಾಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಶಿವಸೇನಾದ ಮುಖ್ಯ ವಕ್ತಾರ ಸಂಜಯ ರಾವುತ್ ಅವರು ಬೆದರಿಕೆಯ ಧ್ವನಿಯಲ್ಲಿಯೇ ಮಾತನಾಡಿದ್ದಾರೆ. ಪಕ್ಷದ ನಾಯಕತ್ವಕ್ಕೆ ವಂಚನೆ ಮಾಡಿದವರು ಮುಕ್ತವಾಗಿ ಓಡಾಡಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ.

ADVERTISEMENT

‘ನೀವು ಹಿಂದಿರುಗಿ ಬಂದು ನನ್ನನ್ನು ಮುಖಾಮುಖಿಯಾದರೆ ನಾವು ದಾರಿಯೊಂದನ್ನು ಕಂಡುಕೊಳ್ಳ
ಬಹುದು. ಪ‍ಕ್ಷದ ಅಧ್ಯಕ್ಷ ಮತ್ತು‍ ಕುಟುಂಬದ ಮುಖ್ಯಸ್ಥನಾಗಿ ನಿಮ್ಮ ಬಗ್ಗೆ ಈಗಲೂ ನನಗೆ ಕಾಳಜಿ ಇದೆ’ ಎಂದು ಉದ್ಧವ್ ಹೇಳಿದ್ದಾರೆ.

ಚರ್ಚೆ: ರಾಜ್ಯಪಾಲರ ಭೇಟಿಗೂ ಮುನ್ನ, ಫಡಣವೀಸ್‌ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರವು ವಿಶ್ವಾಸಮತ ಗೆಲ್ಲುವ ಸಾಧ್ಯತೆ ಕ್ಷೀಣವಾಗಿರುವ ಕಾರಣ, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.

ಅಜಿತ್ ಪವಾರ್‌ ನೇತೃತ್ವದಲ್ಲಿ ಎನ್‌ಸಿಪಿಯ ಒಂದು ಬಣವು ಬಿಜೆಪಿಗೆ ಬೆಂಬಲ ನೀಡಿ ಸರ್ಕಾರ ರಚಿಸುವ ಪ್ರಯೋಗವು 2019ರಲ್ಲಿ ವಿಫಲವಾಗಿತ್ತು. ಹಾಗಾಗಿ, ಬಿಜೆಪಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇರಿಸಲು ತೀರ್ಮಾನಿಸಿದೆ. ಯಾವುದೇ ನಡೆಯು ತಿರುಗುಬಾಣವಾಗಬಾರದು, ಪ್ರಯತ್ನಕ್ಕೆ ಹಿನ್ನಡೆ ಆಗಬಾರದು ಎಂದು ಶಾ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಬೆಂಬಲದಲ್ಲಿ ಸರ್ಕಾರ ರಚನೆ ಯಾದರೆ ಫಡಣವೀಸ್ ಅವರೇ ಮುಖ್ಯಮಂತ್ರಿಯಾಗಬೇಕು. ಶಿವಸೇನಾದ ಬಂಡಾಯ ಮುಖಂಡರಿಗೆ ಉಪಮುಖ್ಯ ಮಂತ್ರಿ ಹುದ್ದೆ ಸೇರಿ ಮಹತ್ವದ ಖಾತೆ ಗಳನ್ನು ನೀಡಬಹುದು ಎಂಬುದು ಬಿಜೆಪಿಯ ಸ್ಪಷ್ಟ ನಿಲುವು ಎನ್ನಲಾಗಿದೆ.

ಬಲಾಬಲ ಪರೀಕ್ಷೆಯತ್ತ

ಸದನದಲ್ಲಿ ಬಲಾಬಲ ಪರೀಕ್ಷೆಯೇ ಮಹಾರಾಷ್ಟ್ರ ರಾಜಕಾರಣದ ಮುಂದಿನ ಮಹತ್ವದ ವಿದ್ಯಮಾನ. ಅನರ್ಹತೆ ಪ್ರಕ್ರಿಯೆಯನ್ನು ಜುಲೈ 12ರವರೆಗೆ ಮುಂದೂಡಿ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದು ಬಂಡಾಯ ಶಾಸಕರಿಗೆ ಅನುಕೂಲವಾಗಿದೆ. ಹಾಗಾಗಿ, ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂಡಾಯ ಶಾಸಕರು ಬಂದಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರ ಪಾತ್ರವೂ ಈಗಿನ ಸಂದ
ರ್ಭದಲ್ಲಿ ಮಹತ್ವದ್ದಾಗಿದೆ. ಎಂವಿಎ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಶಿವಸೇನಾದ ಬಂಡಾಯ ಶಾಸಕರು ರಾಜ್ಯಪಾಲರಿಗೆ ದೂರು ನೀಡಬಹುದು. ಈ ದೂರಿನ ಆಧಾರದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಉದ್ಧವ್ ಅವರಿಗೆ ಸೂಚಿಸಬಹುದು. ಸರ್ಕಾರ ವಿಶ್ವಾಸಮತ ಕಳೆದುಕೊಂಡ ಬಳಿಕವೇ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಬಹುದು ಎನ್ನಲಾಗಿದೆ.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.