ಲಖನೌ(ಉತ್ತರ ಪ್ರದೇಶ): ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟ ಮತ್ತು ಒಳಜಗಳಗಳು ಸದನದಲ್ಲಿ ಮೇಲುಗೈ ಸಾಧಿಸದಿರಲಿ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಪರೋಕ್ಷವಾಗಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಕುಟುಕಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಅಧಿವೇಶ ಆರಂಭವಾಗಲಿದ್ದು, ಈ ವೇಳೆ ಸರ್ಕಾರ ಪೂರಕ ಬಜೆಟ್ ಅನ್ನು ಸಹ ಮಂಡಿಸಲಿದೆ. ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟ ಮತ್ತು ಒಳಜಗಳವು ಸದನದಲ್ಲಿ ಮೇಲುಗೈ ಸಾಧಿಸದಿದ್ದರೆ ಉತ್ತಮ’ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಪ್ರವಾಹದಿಂದ ಸಂತ್ರಸ್ತರಾಗಿರುವ ಲಕ್ಷಾಂತರ ಕುಟುಂಬಗಳಿಗೆ ಸಹಾಯದ ಅವಶ್ಯಕತೆಯಿದ್ದು, ಅವರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವುದು ಆತಂಕಕಾರಿಯಾಗಿದೆ’ ಎಂದು ಕಿಡಿಕಾರಿದ್ದಾರೆ.
‘ಅತಿಕ್ರಮಣದ ಹೆಸರಿನಲ್ಲಿ ಜನರನ್ನು ಸ್ಥಳಾಂತರ ಮಾಡುವ ಬದಲು ಬಡತನ, ನಿರುದ್ಯೋಗ, ಹಣದುಬ್ಬರ ಮತ್ತು ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯಿಂದ ಬಳಲುತ್ತಿರುವ ಜನರ ಜೀವನವನ್ನು ಸುಧಾರಿಸುವತ್ತ ಗಮನಹರಿಸಬೇಕು’ ಎಂದು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.