ಗುವಾಹಟಿ(ಅಸ್ಸಾಂ): ಬಿಜೆಪಿಯ ಬೆದರಿಕೆ ತಂತ್ರಗಳು ಭಾರತ್ ಜೋಡೊ ನ್ಯಾಯ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಗುವಾಹಟಿ ಪ್ರವೇಶಿಸಲು ನ್ಯಾಯ ಯಾತ್ರೆಗೆ ಅವಕಾಶ ನಿರಾಕರಣೆ ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ಯಾತ್ರೆಯ ಹಿಂದೆ ಒಂದು ನ್ಯಾಯದ ಕಲ್ಪನೆಯಿದೆ. ಮುಂದಿನ ಒಂದು ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶಕ್ಕೆ ಶಕ್ತಿ ನೀಡುವ 5 ನ್ಯಾಯ ಸ್ತಂಭಗಳನ್ನು ಮುಂದಿಡಲಿದೆ’ ಎಂದರು
‘ಅಸ್ಸಾಂ ಮುಖ್ಯಮಂತ್ರಿ ದೇಶ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಭ್ರಷ್ಟಾಚಾರದಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ರಾಜ್ಯಕ್ಕೆ ಕಾಲಿಟ್ಟಾಗಲೆಲ್ಲ ಜನರು ತಮ್ಮ ಸಮಸ್ಯೆಗಳ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾರೆ. ಜನರ ಸಮಸ್ಯೆಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಕೆಲಸ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.
‘ಯಾತ್ರೆ ಮುಂದೆ ಸಾಗದಂತೆ ಏನೇ ಮಾಡಿದರೂ ಅದರಿಂದ ನಮಗೆ ಯಾವುದೇ ನಷ್ಟವಿಲ್ಲ. ಯಾತ್ರೆಗೆ ಈವರೆಗೆ ಸಿಗದಿರುವ ಪ್ರಚಾರವನ್ನು ಅಸ್ಸಾಂ ಸಿಎಂ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನೀಡುತ್ತಿದ್ದಾರೆ. ಇದೆಲ್ಲ ಅವರ ಬೆದರಿಕೆಯ ತಂತ್ರಗಳು. ನಮ್ಮ ಸಂದೇಶ ಜನರನ್ನು ತಲುಪುತ್ತಿದೆ’ ಎಂದು ಹೇಳಿದರು.
ಘಟನೆ ಏನು?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಇಂದು ಗುವಾಹಟಿ ನಗರ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಿ ತಡೆಯಲಾಗಿದ್ದು, ಇದರಿಂದ ಆಕ್ರೋಶಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ ಕೂಗಿದ್ದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಟ್ರಾಫಿಕ್ ಜಾಮ್ ತಪ್ಪಿಸಲು ನ್ಯಾಯ ಯಾತ್ರೆಗೆ ಗುವಾಹಟಿ ಪ್ರವೇಶ ನಿರಾಕರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ತಿಳಿಸಿದ್ದರು.
‘ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ ಯಾತ್ರೆಯನ್ನು ನಿಲ್ಲಿಸಲಾಗಿದೆ. 'ಭಾರತ್ ಜೋಡೊ ನ್ಯಾಯ ಯಾತ್ರೆ'ಯ ದೊಡ್ಡ ಧ್ವನಿಯಿಂದ ಹೆದರಿದ ಅಸ್ಸಾಂ ಸರ್ಕಾರ ಇಂತಹ ಹೇಡಿತನದ ಮತ್ತು ನಾಚಿಕೆಗೇಡಿನ ಕೃತ್ಯ ನಡೆಸಿದೆ. ಇದು ಜನರ ಧ್ವನಿ ಎಂಬುದನ್ನು ಬಿಜೆಪಿ ಮರೆಯಬಾರದು. ಯಾವುದೇ ಬೆಲೆ ತೆತ್ತರೂ ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.