ನವದೆಹಲಿ: ಬಿಜೆಪಿಯ ಲೋಕಸಭಾ ಸದಸ್ಯ ನಂದ ಕುಮಾರ್ ಸಿಂಗ್ ಚೌಹಾಣ್ ಸೋಮವಾರ ರಾತ್ರಿ ನಿಧನರಾದರು. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅವರು ದೆಹಲಿಯ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಂದಕುಮಾರ್ (68) ಮಧ್ಯ ಪ್ರದೇಶದ ಖಾಂಡವಾ ಕ್ಷೇತ್ರದ ಸಂಸದರಾಗಿದ್ದರು.
ಅವರು ಹೆಂಡತಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಪೂರ್ವಿಕರ ಸ್ಥಳವಾದ ಶಹಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ನಂದ ಕುಮಾರ್ ಅವರ ಮಗ ಹರ್ಷವರ್ಧನ್ ಚೌಹಾಣ್ ಹೇಳಿದ್ದಾರೆ.
1978ರಲ್ಲಿ ಶಹಪುರ ಮುನ್ಸಿಪಲ್ ಕೌನ್ಸಿಲ್‌ನಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಮಧ್ಯ ಪ್ರದೇಶದ ವಿಧಾನಸಭೆ ಆಯ್ಕೆಯಾದರು. 1985 ಮತ್ತು 1996ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದರು.
2009–14ರಲ್ಲಿ ಕಾಂಗ್ರೆಸ್‌ನ ಅರುಣ್ ಸುಭಾಷ್ ಚಂದ್ರ ಯಾದವ್ ಎದುರು ಸೋಲು ಕಂಡಿದ್ದು ಹೊರತು ಪಡಿಸಿ, ಖಾಂಡವಾ ಲೋಕಸಭಾ ಕ್ಷೇತ್ರದಿಂದ 1996ರಿಂದ ಆರು ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2018ರ ಏಪ್ರಿಲ್ 18ರ ವರೆಗೂ ಮಧ್ಯ ಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು.
'ಖಾಂಡವಾ ಕ್ಷೇತ್ರದ ಲೋಕ ಸಭಾ ಸದಸ್ಯ ನಂದಕುಮಾರ್ ಸಿಂಗ್ ಚೌಹಾಣ್ ಅವರು ಅಗಲಿಕೆಯು ನೋವು ತಂದಿದೆ. ಸಂಸತ್ತಿನ ಕಾರ್ಯಕಲಾಪಗಳಲ್ಲಿ ಅವರ ಕೊಡುಗೆಗಳು, ಸಂಘಟನಾ ಕೌಶಲ್ಯ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿಯನ್ನು ಬಲಗೊಳಿಸುವಲ್ಲಿ ತೋರಿರುವ ಶ್ರಮಗಳಿಂದ ಅವರು ನೆನಪಿನಲ್ಲಿ ಉಳಿಯುತ್ತಾರೆ....' ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
'ಜನಪ್ರಿಯ ಮುಖಂಡ ನಂದು ಭಯ್ಯಾ ನಮ್ಮನ್ನು ಅಗಲಿದ್ದಾರೆ. ಬಿಜೆಪಿ ಉತ್ತಮ ಕೆಲಸಗಾರರನ್ನು ಕಳೆದುಕೊಂಡಿದೆ. ನನಗಿದು ವೈಯಕ್ತಿವಾಗಿ ಆದ ನಷ್ಟ...' ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.