ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಿತ ಒಳನುಸುವಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚಿಸುವುದೇ ಬಿಜೆಪಿಯ ಮುಂದಿನ ದೊಡ್ಡ ಗುರಿ ಎಂದು ಹೇಳಿದ್ದಾರೆ.
ಕೋಲ್ಕತ್ತದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ನಂತರ ಅದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದರು.
‘ವಿಶ್ವದ ಅತಿದೊಡ್ಡ ಪಕ್ಷದ ಸದಸ್ಯರಾಗಲು ನಾವೆಲ್ಲರೂ ಹೆಮ್ಮೆಪಡುತ್ತೇವೆ. ಸದಸ್ಯತ್ವದಲ್ಲಿ ಬಂಗಾಳದ ಜನರು ಹಿಂದುಳಿದಿಲ್ಲ ಎಂದು ನನಗೆ ನಂಬಿಕೆಯಿದೆ. ಪಕ್ಷವು ಒಂದು ಕೋಟಿ ಸದಸ್ಯರ ಗುರಿಯನ್ನು ಹೊಂದಿದೆ. ನಾವು ಇಂದಿನ ರಾಜಕೀಯ ಪಕ್ಷಗಳ ಇತಿಹಾಸವನ್ನು ಪರಿಶೀಲಿಸಿದರೆ. ಹೆಚ್ಚಿನವರು ಜಾತಿ ಅಥವಾ ಕುಟುಂಬದ ಆಧಾರದ ಮೇಲೆ ನಡೆಸುತ್ತಿದ್ದಾರೆ. ಯಾವುದೇ ಹಿನ್ನೆಲೆಯಿಲ್ಲದೆ ಸಾಮಾನ್ಯ ಕಾರ್ಯಕರ್ತರಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳನ್ನು ಹೊಂದಿರುವ ಭಾರತೀಯ ಜನತಾ ಪಕ್ಷವು ವಿಶಿಷ್ಟವಾಗಿದೆ’ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರವನ್ನು ಸ್ಥಾಪಿಸುವುದು ಬಿಜೆಪಿಯ ಮುಂದಿನ ಪ್ರಮುಖ ಗುರಿ ಎಂದು ಅವರು ಒತ್ತಿ ಹೇಳಿದರು
ಕೋಲ್ಕತ್ತದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಾ, ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಗೆ ಆತಂಕವಿದೆ ಎಂದಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಘನತೆ ಧಕ್ಕೆ ತರಲಾಗಿದೆ. ಸಂದೇಶ್‌ಖಾಲಿ, ಆರ್.ಜಿ. ಕರ್ ಆಸ್ಪತ್ರೆಯಂತಹ ಘಟನೆಗಳನ್ನು ನಿಲ್ಲಿಸಬೇಕು. 2026ರಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಮಾತ್ರ ಅದು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ ನಮಗೆ ಮೂರನೇ ಎರಡರಷ್ಟು ಬಹುಮತ ಸಿಗಲಿದೆ’ಎಂದು ಹೇಳಿದರು.
2004ರಿಂದ 2014ರವರೆಗೆ ಯುಪಿಎ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ₹2.9 ಲಕ್ಷ ಕೋಟಿ ಅನುದಾನ ನೀಡಿದ್ದನ್ನು ದೊಡ್ಡದಾಗಿ ಬಿಂಬಿಸುತ್ತಿರುವ ಮಮತಾರನ್ನು ತರಾಟೆಗೆ ತೆಗೆದುಕೊಂಡ ಶಾ, 2014ರಿಂದ 2024ರವರೆಗೆ ಎನ್‌ಡಿಎ ಸರ್ಕಾರವು ₹7,74 ಲಕ್ಷ ಕೋಟಿ ನೀಡಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.