ADVERTISEMENT

ಬಿಜೆಪಿಯ ತಂತ್ರಗಳು ಟಿಎಂಸಿಯನ್ನು ಮತ್ತಷ್ಟು ಬಲಿಷ್ಠವಾಗಿಸಲಿವೆ: ಮದನ್‌ ಮಿತ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2021, 11:45 IST
Last Updated 3 ಸೆಪ್ಟೆಂಬರ್ 2021, 11:45 IST
ಟಿಎಂಸಿ ಶಾಸಕ ಮದನ್‌ ಮಿತ್ರಾ
ಟಿಎಂಸಿ ಶಾಸಕ ಮದನ್‌ ಮಿತ್ರಾ   

ಕೋಲ್ಕತ್ತ: ಬಿಜೆಪಿಯ ಪ್ರತಿಯೊಂದು ತಂತ್ರವೂ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು (ಟಿಎಂಸಿ) ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ತ್ರಿಪುರ, ಉತ್ತರ ಪ್ರದೇಶ ಮತ್ತು ಗುಜರಾಜ್‌ನಲ್ಲಿಯೂ ಬಲಿಷ್ಠವಾಗಿಸಲಿದೆ ಎಂದು ಟಿಎಂಸಿ ಶಾಸಕ ಮದನ್‌ ಮಿತ್ರಾ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಮಿತ್ರಾ, ʼನನ್ನ ಹೆಸರು ಜಾರಿ ನಿರ್ದೇಶನಾಲಯದ (ಇ.ಡಿ.) ಆರೋಪ ಪಟ್ಟಿಯಲ್ಲಿರುವುದಕ್ಕೆ ನಾನು ತುಂಬಾ ಸಂತೋಷಗೊಂಡಿದ್ದೇನೆ. ಇಲ್ಲದಿದ್ದರೆ ನನಗೆ ಮಾನಹಾನಿಯಾಗುತ್ತಿತ್ತು. ಸುಮೇಂದು ಅಧಿಕಾರಿ ಬಿಜೆಪಿಯವರು ಎಂಬ ಕಾರಣಕ್ಕೆ ಅವರ ಹೆಸರು ಆರೋಪಪಟ್ಟಿಯಲ್ಲಿಇಲ್ಲ. ಯಾರೆಲ್ಲ ಬಿಜೆಪಿಯಲ್ಲಿದ್ದಾರೋ ಅವರ ಹೆಸರುಗಳು ಆರೋಪಪಟ್ಟಿಯಲ್ಲಿ ಉಲ್ಲೇಖವಾಗುವುದಿಲ್ಲʼ ಎಂದು ಕಿಡಿಕಾರಿದ್ದಾರೆ.

ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 ಅಡಿಯಲ್ಲಿ ಟಿಎಂಸಿ ನಾಯಕರಾದ ಪಿರ್ಹಾದ್‌ ಹಕೀಂ, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ವಿರುದ್ಧಇ.ಡಿ. ದೂರು ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೇ ಮಿತ್ರಾ ಹೇಳಿಕೆ ನೀಡಿದ್ದಾರೆ.

ADVERTISEMENT

ʼಬಿಜೆಪಿಯಲ್ಲಿ ಇಲ್ಲದ ಸಾಕಷ್ಟು ಹಿರಿಯ ನಾಯಕರ ಹೆಸರುಗಳು ಇ.ಡಿ. ಆರೋಪಪಟ್ಟಿಯಲ್ಲಿವೆ. ಆದರೆ, ತನಿಖೆ ಮುಕ್ತಾಯವಾಗಿದೆ. ಇದೀಗ ಅವರು ಪ್ರತಿದಿನ ನೋಟಿಸ್‌ ನೀಡಲು ಸಾಧ್ಯವಿಲ್ಲ. ಬಿಜೆಪಿಯು ಇಂತಹ ತಂತ್ರಗಳನ್ನು ಹೆಚ್ಚೆಚ್ಚು ಮಾಡಿದಷ್ಟೂ, ಟಿಎಂಸಿ ಬಲಿಷ್ಠವಾಗುತ್ತದೆ. ಮುಂಬರುವ ದಿನಗಳಲ್ಲಿ ತ್ರಿಪುರಾ, ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿಯೂ ಟಿಎಂಸಿ ಪ್ರಬಲವಾಗಲಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಲಿ ಶಾಸಕರು, ಸಂಸದರು ಮತ್ತು ಐಪಿಎಸ್‌ ಅಧಿಕಾರಿಯೊಬ್ಬರೂ ಸೇರಿದಂತೆ ಒಟ್ಟು 12 ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ಅಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ಇ.ಡಿ. ತನಿಖೆ ನಡೆಸಿತ್ತು.

ಎಫ್‌ಐಆರ್‌ ಪ್ರಕಾರ, 2014ರಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ್ದ‌ ಮ್ಯಾಥ್ಯೂ ಸ್ಯಾಮುಯೆಲ್ಸ್, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ವಿಡಿಯೊ ಹಾಗೂ ದಾಖಲೆಗಳನ್ನು ಸಂಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.