ADVERTISEMENT

ರಾಮ ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕಾರ | ಕಾಂಗ್ರೆಸ್‌ ಹಿಂದೂ ವಿರೋಧಿ: ಬಿಜೆಪಿ

ಪಿಟಿಐ
Published 10 ಜನವರಿ 2024, 15:53 IST
Last Updated 10 ಜನವರಿ 2024, 15:53 IST
ರಾಮ ಮಂದಿರ
ರಾಮ ಮಂದಿರ   

ನವದೆಹಲಿ: ಕಾಂಗ್ರೆಸ್‌ ಹಿಂದೂ ವಿರೋಧಿ ಎಂದು ಬಿಜೆಪಿ ಹೇಳಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್‌ ತಿರಸ್ಕರಿಸಿದ್ದನ್ನು ಪಕ್ಷ ಟೀಕಿಸಿದೆ.

ಕೇಂದ್ರ ಸಚಿವರುಗಳಾದ ಅನುರಾಗ್‌ ಠಾಕೂರ್‌, ಸ್ಮೃತಿ ಇರಾನಿ ಮತ್ತು ಹರ್ದೀಪ್‌ಸಿಂಗ್‌ ಪುರಿ ಅವರು ಕಾಂಗ್ರೆಸ್‌ನ ನಿರ್ಧಾರವನ್ನು ಖಂಡಿಸಿದ್ದಾರೆ.

‘ಕಾರ್ಯಕ್ರಮವನ್ನು ಕಾಂಗ್ರೆಸ್‌ ಬಹಿಷ್ಕರಿಸಿರುವುದು ಜನರು ಆ ಪಕ್ಷವನ್ನು ಬಹಿಷ್ಕರಿಸುವಂತೆ ಮಾಡಲಿದೆ’ ಎಂದು ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ADVERTISEMENT

’ಆ ಪಕ್ಷ ಯಾವಾಗಲೂ ಸನಾತನ ಧರ್ಮದ ವಿರುದ್ಧ ನಿಂತಿದೆ. ರಾಮಸೇತುವನ್ನು ವಿರೋಧಿಸಿದೆ ಮತ್ತು ಹಿಂದೂಗಳು  ಮೂಲಭೂತವಾದಿಗಳು ಎಂದು ಆರೋಪಿಸಿದೆ– ಈ ಬೆಳವಣಿಗೆ ಹೊಸತೇನಲ್ಲ. ಇಂದು ಕಾಂಗ್ರೆಸ್‌ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ’ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.

ದೆಹಲಿ ವಿಶ್ವ ಹಿಂದೂ ಪರಿಷತ್‌ನ ದೆಹಲಿ ಘಟಕದ ಅಧ್ಯಕ್ಷ ಕಪಿಲ್‌ ಖನ್ನಾ ಅವರು, ರಾಜಕೀಯವನ್ನು ಕಾಂಗ್ರೆಸ್ ಒಂದು ದಿನದ ಮಟ್ಟಿಗೆ ಬದಿಗಿಡಬೇಕು. ‘ನಾವು ಎಲ್ಲ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಿದ್ದೇವೆ ಮತ್ತು ಕಾರ್ಯಕ್ರಮದ ವಿವರ ನೀಡಿದ್ದೇವೆ. ಕೆಲವರು ಒಪ್ಪಿಕೊಂಡಿದ್ದಾರೆ, ಕೆಲವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ ತನ್ನ ರಾಜಕೀಯವನ್ನು ಈ ತಿಂಗಳ 21ರವರೆಗೆ ಮಾಡಲಿ. ಮತ್ತೆ 23ರಿಂದ ಅದನ್ನು ಪುನರಾರಂಭಿಸಲಿ. 22ನೇ ತಾರೀಖಿನ ದಿನವನ್ನು ರಾಮನಿಗೆ ಮೀಸಲಾಗಿಡಲಿ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಸುಮಾರು 8000 ಆಹ್ವಾನಗಳ ಪೈಕಿ, 45 ಹಿಂದೂ ಸಂತರು, ವಿಶ್ವದ 1500 ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ. ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಗೆ ಆಹ್ವಾನ ಹೋಗಿದೆ. ಕಾಂಗ್ರೆಸ್‌ನ ಮೂವರಿಗೆ ಆಹ್ವಾನ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

 ಕಾಂಗ್ರೆಸ್‌ ಪಕ್ಷ ರಾಮನನ್ನು ವಿರೋಧಿಸುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂಗ್ರೆಸ್‌ನ ರಾಮ– ವಿರೋಧಿ ಮುಖವು ದೇಶದ ಮುಂದಿದೆ. ಸೋನಿಯಾ ಗಾಂಧಿ ಅವರ ನೇತೃತ್ವದಡಿ ಪಕ್ಷವು ರಾಮನು ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು. ಈಗ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಎಲ್ಲಾ ಭಕ್ತರಿಗೆ ಇದು ಶ್ರದ್ಧಾಭಕ್ತಿಯ ದಿನ. ಇದನ್ನು ಅವರು ತಿರಸ್ಕರಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ನಾಯಕರ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಳ್ಳಿ ಹಾಕಿರುವುದು ಅವರ ಸನಾತನ ವಿರೋಧಿ ಮನೋಭಾವವನ್ನು ಬಿಂಬಿಸುತ್ತದೆ’ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.