ADVERTISEMENT

ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ: ಜಗನ್ ನಿವಾಸದ ಎದುರು BJYM ಪ್ರತಿಭಟನೆ

ಪಿಟಿಐ
Published 22 ಸೆಪ್ಟೆಂಬರ್ 2024, 9:32 IST
Last Updated 22 ಸೆಪ್ಟೆಂಬರ್ 2024, 9:32 IST
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ   

ಸಂಗ್ರಹ ಚಿತ್ರ 

ಅಮರಾವತಿ: ತಿರುಪತಿ ದೇವಸ್ಥಾನದ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಬಿಜೆವೈಎಂ ಕಾರ್ಯಕರ್ತರು ಮಾಜಿ ಸಿಎಂ, ವೈಎಸ್‌ಆರ್‌ಸಿಪಿ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನಿವಾಸದ ಎದುರು ಪ್ರತಿಭಟನೆ  ನಡೆಸಿದ್ದಾರೆ.

ತಾಡೆಪಲ್ಲಿಯಲ್ಲಿರುವ ಜಗನ್ ನಿವಾಸದ ಎದುರು ಧರಣಿ ಕುಳಿತ ಕಾರ್ಯಕರ್ತರು, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಕೆಲವು ಬಿಜೆವೈಎಂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ಏನಿದು ವಿವಾದ?

ತಿರುಮಲ ದೇವಸ್ಥಾನದ ಪ್ರಸಾದ ‘ಲಡ್ಡು‘ ತಯಾರಿಸಲು, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು  ಹೇಳಿಕೆ ನೀಡಿದ್ದರು.  ಈ ಬಗ್ಗೆ  ವರದಿ ನೀಡುವಂತೆ ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.  

ಲಡ್ಡುಗಳಿಗೆ ಬಳಸುವ ತುಪ್ಪದಲ್ಲಿ ಹಂದಿ ಕೊಬ್ಬು ಸೇರಿದಂತೆ ಇತರ ಪ್ರಾಣಿಗಳ ಕೊಬ್ಬಿನ ಅಂಶ ಇರುವುದನ್ನು ಪ್ರಯೋಗಾಲಯದ ಪರೀಕ್ಷೆಗಳು ಬಹಿರಂಗಪಡಿಸಿವೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜೆ. ಶ್ಯಾಮಲ ರಾವ್‌ ಶುಕ್ರವಾರ ಹೇಳಿದ್ದರು. ದೇವಸ್ಥಾನದಲ್ಲಿ ಕಲಬೆರಕೆ ಪರೀಕ್ಷೆ ಮಾಡಲು ಸೌಲಭ್ಯಗಳು ಇಲ್ಲ ಎಂಬ ಕೊರತೆಯ ಲಾಭವನ್ನು ತುಪ್ಪ ಪೂರೈಕೆದಾರರು ಪಡೆದುಕೊಂಡಿದ್ದರಿಂದ ಈ ಲೋಪ ಆಗಿದೆ ಎಂದೂ  ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.