ನವದೆಹಲಿ: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತರ ಪ್ರತಿಭಟನೆಯಲ್ಲಿ ಟಿಕಾಯತ್ ಅವರು ಮುಂದಾಳತ್ವ ವಹಿಸಿದ್ದರು.
ಕೇಂದ್ರ ಸರ್ಕಾರವು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟಿರುವ ರೈತರು ತಮ್ಮ ಊರುಗಳಿಗೆ ಮರಳಿದ್ದಾರೆ. ರಾಕೇಶ್ ಟಿಕಾಯತ್ ಅವರು ಮೀರತ್‌ಗೆ ಹಿಂದಿರುಗಿದ್ದು, 'ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಹಾಗೂ ಯಾವುದೇ ರಾಜಕೀಯ ಪಕ್ಷವೂ ಅವರ ಪೋಸ್ಟರ್‌ಗಳಲ್ಲಿ ನನ್ನ ಹೆಸರು ಅಥವಾ ಚಿತ್ರವನ್ನು ಬಳಸಬಾರದು' ಎಂದು ಹೇಳಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಅವುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿಯಲ್ಲಿ ರೈತರು ಒಂದು ವರ್ಷಕ್ಕೂ ಹೆಚ್ಚು ಸಮಯ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ವರ್ಷ ನವೆಂಬರ್ 29ರಂದು ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಗೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಸರ್ಕಾರವು ಪತ್ರ ಮುಖೇನ ರೈತರಿಗೆ ಭರವಸೆ ನೀಡಿದೆ.
ದೆಹಲಿಯ ಸಿಂಘು, ಗಾಜೀಪುರ ಹಾಗೂ ಟಿಕ್ರಿ ಗಡಿ ಭಾಗಗಳಿಂದ ರೈತರು ತಮ್ಮ ರಾಜ್ಯಗಳಿಗೆ ಟ್ರ್ಯಾಕ್ಟರ್ ಹಾಗೂ ಟ್ರಕ್‌ಗಳ ಮೂಲಕ ತೆರಳಿದ್ದಾರೆ.
ಬಿಕೆಯು ರಾಷ್ಟ್ರೀಯ ವಕ್ತಾರರಾಗಿರುವ ರಾಕೇಶ್ ಟಿಕಾಯತ್(51) ಅವರು ಪ್ರತಿಭಟನೆಯ ಮೂಲಕ ರಾಜಕೀಯ ಉದ್ದೇಶಗಳನ್ನು ಪೂರೈಸಿಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಟಿಕಾಯತ್ ಅವರು ದೆಹಲಿ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿ, 1992–93ರಲ್ಲಿ ಹುದ್ದೆ ತೊರೆದಿದ್ದರು. 2020ರ ನವೆಂಬರ್ 28ರಿಂದ ಅವರು ಗಾಜೀಪುರ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಕೆಯು ಬೆಂಬಲಿಗರ ಮುಂದಾಳತ್ವ ವಹಿಸಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು
2007ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ನಗರದ ಖತೌನಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2014ರಲ್ಲಿ ಅಮರೋಹಾ ಜಿಲ್ಲೆಯಿಂದ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಲೋಕ ದಳದಿಂದ (ಆರ್‌ಎಲ್‌ಡಿ) ಸ್ಪರ್ಧಿಸಿದ್ದರು. ಆ ಎರಡೂ ಚುನಾವಣೆಗಳಲ್ಲಿ ಸೋಲು ಕಂಡಿದ್ದರು.
ಇದನ್ನೂ ಓದಿ: ದೆಹಲಿ ಗಡಿಗಳಲ್ಲಿ ಭಾವನೆಗಳ ಓಕುಳಿ
ಹೋರಾಟ ಹಿಂಪಡೆದಿಲ್ಲ...
ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿರುವ ಟಿಕಾಯತ್, 'ನಾವು ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ, ಆದರೆ ಹಿಂಪಡೆದಿಲ್ಲ. ಕೇಂದ್ರದೊಂದಿಗೆ ಮಾತುಕತೆ ಮುಂದುವರಿದಿದೆ' ಎಂದಿದ್ದಾರೆ.
ಜನವರಿ 15ರಂದು ರೈತ ಸಂಘಟನೆಗಳು ಪರಿಶೀಲನಾ ಸಭೆ ನಡೆಸಲಿದ್ದು, ಸರ್ಕಾರವು ಭರವಸೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಗಳನ್ನು ಪುನಃ ಆರಂಭಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಈ ಹಿಂದೆಯೇ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.