ಇಡುಕ್ಕಿ: ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಅವರು ತೊಡುಪುಳಕ್ಕೆ ಭೇಟಿ ನೀಡಿದ್ದ ವೇಳೆ ಎಲ್‌ಡಿಎಫ್‌ನ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.
ಕೇರಳ ಸರ್ಕಾರದ ಭೂಹಂಚಿಕೆ ಕಾಯ್ದೆ 2023ಕ್ಕೆ ರಾಜ್ಯಪಾಲರು ಅಂಕಿತ ಹಾಕದಿರುವುದನ್ನು ವಿರೋಧಿಸಿ ಇಡುಕಿಯಲ್ಲಿ ಎಲ್‌ಡಿಎಫ್ ಕರೆಕೊಟ್ಟಿದ್ದ ಹರತಾಳದ ನಡುವೆಯೇ ರಾಜ್ಯಪಾಲರು ಇಡುಕ್ಕಿ ಜಿಲ್ಲೆಗೆ ಆಗಮಿಸಿದ್ದರು. ‘ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ’ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲರು ತೆರಳುತ್ತಿದ್ದ ವೇಳೆ ಕಾರನ್ನು ತಡೆಯಲು ಯತ್ನಿಸಿದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
ಎಸ್‌ಎಫ್ಐ, ಡಿವೈಎಫ್ಐ ಮತ್ತು ಯೂತ್ ಫ್ರಂಟ್ ಸೇರಿದಂತೆ ಎಡರಂಗದ ಯುವ ಘಟಕಗಳು ರಾಜ್ಯಪಾಲರ ಕಾರ್ಯಕ್ರಮ ನಡೆಯುತ್ತಿದ್ದ ಕಡೆಗೆ ಮೆರವಣಿಗೆ ನಡೆಸಿದರು. ಇದಕ್ಕೂ ಮೊದಲು ಸಿಪಿಎಂನ ಸ್ಥಳೀಯ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ಧಿಕ್ಕಾರ ಕೂಗಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಖಾನ್ ಅವರು, ‘ನನ್ನ ಸಾಂವಿಧಾನಿಕ ಕರ್ತವ್ಯಗಳನ್ನು ನಾನು ಮಾಡುತ್ತಿದ್ದೇನೆ. ನಾನು ಜನರ ಸೇವಕ ಹೊರತು ರಬ್ಬರ್ ಸ್ಟಾಂಪ್ ಅಲ್ಲ. ಕೇರಳದ ಜನರ ಅಭಿವೃದ್ಧಿಗಾಗಿ ಕೆಲಸ, ಮಾಡುವುದು ನನ್ನ ಕರ್ತವ್ಯ. ಈ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.