ನವದೆಹಲಿ/ಬರ್ನ್: ಕಪ್ಪುಹಣಕ್ಕೆ ಪ್ರಶಸ್ತ ತಾಣ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿರುವ ಸ್ವಿಟ್ಜರ್ಲೆಂಡ್, ಎರಡು ಕಂಪನಿಗಳು ಹಾಗೂ ಮೂವರು ವ್ಯಕ್ತಿಗಳ ಮಾಹಿತಿಯನ್ನು ಭಾರತದ ಜೊತೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ.
ಜಿಯೊಡೆಸಿಕ್ ಲಿಮಿಟೆಡ್ ಹಾಗೂ ಆದಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗಳು ಹಾಗೂಜಿಯೊಡೆಸಿಕ್ ಸಂಸ್ಥೆಗೆ ಸಂಬಂಧಿಸಿದ ಪಂಕಜ್‌ಕುಮಾರ್ ಓಂಕಾರ್ ಶ್ರೀವಾಸ್ತವ, ಪ್ರಶಾಂತ್ ಶರದ್ ಮುಲೇಕರ್ ಮತ್ತು ಕಿರಣ್ ಕುಲಕರ್ಣಿ ಅವರ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ ನೀಡಲಿದೆ.
ಭಾರತದ ಮನವಿ ಮೇರೆಗೆ ‘ಆಡಳಿತಾತ್ಮಕ ನೆರವು’ ನೀಡುವುದಾಗಿ ಸರ್ಕಾರ ತನ್ನ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ನಿರ್ಧಿಷ್ಟ ಮಾಹಿತಿಯನ್ನು ನೀಡುವುದಿಲ್ಲ. ಆರ್ಥಿಕ ಮತ್ತು ತೆರಿಗೆ ಸಂಬಂಧಿಸಿದ ಪುರಾವೆಗಳನ್ನು ಮಾತ್ರ ಒದಗಿಸಲಿದೆ.
ಮಾಹಿತಿ ಹಂಚಿಕೊಳ್ಳುವ ಸ್ವಿಟ್ಜರ್ಲೆಂಡ್ ತೆರಿಗೆ ಪ್ರಾಧಿಕಾರದ (ಎಫ್‌ಟಿಎ) ಈ ನಿರ್ಧಾರವನ್ನು ಪ್ರಶ್ನಿಸಲು ಅವಕಾಶವಿದೆ.
ಅಸಮರ್ಪಕ ಕಾರ್ಯವಿಧಾನ ಆರೋಪದಲ್ಲಿ ಜಿಯೊಡೈಸ್ ಕಂಪೆನಿಯನ್ನು ಷೇರು ವಿನಿಮಯ ಕೇಂದ್ರವು ಅಮಾನತುಗೊಳಿಸಿತ್ತು. ಸಂಸ್ಥೆಯ ನಿರ್ದೇಶಕರ ಮೇಲೆ ಸೆಬಿ, ಜಾರಿ ನಿರ್ದೇಶನಾಲಯಗಳು ಕ್ರಮ ಜರುಗಿಸಿದ್ದವು.
2014ರಲ್ಲಿ ಚೆನ್ನೈನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳವಣಿಗೆ ದಾಖಲಿಸಿದ್ದ ಆದಿ ಎಂಟರ್‌ಪ್ರೈಸಸ್ ಸಂಸ್ಥೆಯು ಕಳಂಕಿತ ರಾಜಕಾರಣಿಗಳ ಜತೆಗಿನ ನಂಟು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತೊಂದರೆಗೆ ಸಿಲುಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.