ನವದೆಹಲಿ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ನಡೆಸುವ ದಾಳಿಗಳನ್ನು ವಿಫಲಗೊಳಿಸುವುದೇ ಭದ್ರತಾ ಪಡೆಗಳ ಮುಂದಿರುವ ದೊಡ್ಡ ಸವಾಲು. ಛತ್ತೀಸಗಢದ ಬಸ್ತರ್ ವಲಯದಲ್ಲಿ ಬುಧವಾರ ನಡೆದ ನಕ್ಸಲರ ದಾಳಿಯು ಇಂತಹ ಸವಾಲು ಕುರಿತು ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
‘ಐಇಡಿಗಳನ್ನು ಪತ್ತೆ ಹಚ್ಚುವಂತಹ ಉತ್ತಮ ತಂತ್ರಜ್ಞಾನ ಇಲ್ಲದಿರುವುದು ದೊಡ್ಡ ಕೊರತೆ’ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ಹೇಳುತ್ತಾರೆ.
‘ನಕ್ಸಲ ನಿಗ್ರಹ ಕಾರ್ಯಾಚರಣೆಗಳು ನಡೆದ ಸಂದರ್ಭಗಳಲ್ಲಿ ನಕ್ಸಲರು ಭದ್ರತಾ ಪಡೆಗಳೊಂದಿಗೆ ನೇರವಾಗಿ ಕಾಳಗ ನಡೆಸುವುದಿಲ್ಲ. ಬಂದೂಕುಗಳು, ರೈಫಲ್ಸ್‌ನಂತಹ ಆಯುಧಗಳು ಅವರಲ್ಲಿ ಖಾಲಿಯಾಗಿವೆ. ಹೀಗಾಗಿ, ಅವರು ಐಇಡಿಗಳನ್ನು ಬಳಸಿ, ಹೊಂಚು ಹಾಕಿ ದಾಳಿ ನಡೆಸುತ್ತಾರೆ’ ಎಂದೂ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.
ಬುಧವಾರ ನಕ್ಸಲರ ದಾಳಿ ನಡೆದಿರುವ ಪ್ರದೇಶಗಳು ಬಸ್ತರ್ ವಲಯದ ಸುಕ್ಮಾ ಜಿಲ್ಲೆಯ ದಕ್ಷಿಣ ತುದಿಯಲ್ಲಿದೆ. ಇದು ಛತ್ತೀಸಗಡ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳು ಸೇರುವ ಸ್ಥಳ. ಈ ಪ್ರದೇಶವು ಅರಣ್ಯದಿಂದ ಕೂಡಿರುವ ಕಾರಣ ಇಲ್ಲಿ ನಕ್ಸಲರು ಅವಿತು ದಾಳಿ ನಡೆಸಿವುದು ಅಧಿಕ.
ಇದೇ ಸ್ಥಳದಲ್ಲಿ 2010ರಲ್ಲಿ ನಡೆದಿದ್ದ ನಕ್ಸಲರ ದಾಳಿಯಲ್ಲಿ ಸಿಆರ್‌ಪಿಎಫ್‌ನ 75 ಯೋಧರು ಮೃತಪಟ್ಟಿದರು.
ಜಾರ್ಖಂಡ್ ಹಾಗೂ ಬಿಹಾರದಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯಾಚರಣೆಗಳನ್ನು ನಡೆಸಿರುವ ಪರಿಣಾಮ ಈ ರಾಜ್ಯಗಳಲ್ಲಿ ಎಡಪಂಥೀಯರ ಉಗ್ರವಾದ (ಎಲ್‌ಡಬ್ಲ್ಯುಇ) ಬಹುತೇಕ ಕೊನೆಗೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ನಕ್ಸಲರು ನಡೆಸುವ ಹಿಂಸಾಚಾರ ಘಟನೆಗಳು ಶೇ 77ರಷ್ಟು ಕಡಿಮೆಯಾಗಿವೆ ಎಂದೂ ಕೇಂದ್ರ ಹೇಳುತ್ತಿದೆ.
ಆದರೆ, ಛತ್ತೀಸಗಢದ ದಕ್ಷಿಣ ಗಡಿಯ ಪ್ರದೇಶಗಳಲ್ಲಿ ಐಇಡಿಗಳನ್ನು ರಹಸ್ಯವಾಗಿಟ್ಟು ನಕ್ಸಲರು ನಡೆಸುವ ವಿಧ್ವಂಸಕ ಕೃತ್ಯಗಳು ಈಗಲೂ ಸವಾಲಾಗಿವೆ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಾರೆ.
‘ಭದ್ರತಾ ಪಡೆಗಳು ನಡೆಸುವ ಕಾರ್ಯಾಚರಣೆಗೆ ಪ್ರತಿಯಾಗಿ ನಕ್ಸಲರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಪಡೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ದುರದೃಷ್ಟವಶಾತ್, ದಾಂತೇವಾಡ ಜಿಲ್ಲೆಯಲ್ಲಿ ಡಿಆರ್‌ಜಿ ಸಿಬ್ಬಂದಿ ಇದ್ದ ವಾಹನವನ್ನು ಸ್ಫೋಟಿಸುವಲ್ಲಿ ನಕ್ಸಲರು ಯಶ ಕಂಡಿದ್ದಾರೆ. ಈ ಘಟನೆಗೆ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.