ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಾಲೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸಂಶಯಾಸ್ಪದ ಭಾರಿ ಸ್ಫೋಟ ಜನರಲ್ಲಿ ಆತಂಕಕ್ಕೆ ಕಾರಣವಾಯಿತು.
ರೋಹಿಣಿ ಪ್ರದೇಶದ ಪ್ರಶಾಂತ್ ವಿಹಾರದಲ್ಲಿ ಬೆಳಗಿನ 7.45ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಶಾಲೆಯ ಆವರಣ ಗೋಡೆ ಹಾಗೂ ಸಮೀಪದ ಕೆಲ ಅಂಗಡಿಗಳಿಗೆ ಹಾನಿಯುಂಟಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಭಾರಿ ಸ್ಫೋಟದ ಸದ್ದು ಹಾಗೂ ಸ್ಥಳದಲ್ಲಿ ದಟ್ಟವಾದ ಬಿಳಿ ಹೊಗೆಯಿಂದ ಗಾಬರಿಗೊಂಡ ಜನರು, ಮನೆಗಳಿಂದ ಹೊರಗೆ ಓಡಿ ಬಂದರು.
‘ಸ್ಫೋಟದ ತೀವ್ರತೆಯಿಂದಾಗಿ ಉಂಟಾದ ಕಂಪನ, ಘಟನಾ ಸ್ಥಳದಿಂದ ದೂರವಿರುವ ಮನೆಗಳಲ್ಲಿಯೂ ಅನುಭವಕ್ಕೆ ಬಂತು. ರಾಸಾಯನಿಕ ವಸ್ತುವೊಂದರ ವಾಸನೆಯಿಂದ ಕೂಡಿದ ಬಿಳಿ ಬಣ್ಣದ ದಟ್ಟ ಹೊಗೆ ಘಟನಾ ಸ್ಥಳದಲ್ಲಿ ತುಂಬಿಕೊಂಡಿತ್ತು’ ಎಂಬ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ನಂಬಲಸಾಧ್ಯವಾದ ಭಾರಿ ಸದ್ದು ಕೇಳಿಬಂತು. ನಂತರ 15–20 ನಿಮಿಷಗಳ ಕಾಲ ಎಲ್ಲೆಡೆ ದಟ್ಟವಾದ ಹೊಗೆ ತುಂಬಿತ್ತು’ ಎಂದು ಅಲ್ಲಿನ ನಿವಾಸಿ ಕಿರಣ್ ಸಚದೇವ್ ಹೇಳಿದ್ದಾರೆ.
‘ಸ್ಫೋಟ, ದಟ್ಟ ಹೊಗೆ ಕಂಡು ಬಂದ ಕೂಡಲೇ ನಾನು ಘಟನಾ ಸ್ಥಳಕ್ಕೆ ಓಡಿ ಹೋದೆ. ಅದೇ ವೇಳೆ, ಕಿಟಕಿ ಗಾಜುಗಳು, ಬೋರ್ಡ್‌ಗಳು ಮುರಿದು ಬಿದ್ದವು. ಗಾಬರಿಗೊಂಡ ನಾನು ನನ್ನ ಅಂಗಡಿಯತ್ತ ಓಡಿಬಂದೆ’ ಎಂದು ಅಂಗಡಿ ಮಾಲೀಕ ಹಿಮಾಂಶು ಕೊಹ್ಲಿ ಹೇಳಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ತಂಡ, ದೆಹಲಿ ಪೊಲೀಸ್‌ನ ಕ್ರೈಂ ವಿಭಾಗ ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿವೆ. ಎನ್‌ಐಎ, ಎನ್‌ಎಸ್‌ಜಿಯ ಹಿರಿಯ ಅಧಿಕಾರಿಗಳು, ದೆಹಲಿ ಅಗ್ನಿ ಸೇವೆಗಳ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
‘ಸ್ಫೋಟಗೊಂಡಿರುವುದು ಕಚ್ಚಾ ಬಾಂಬ್ ಅಥವಾ ಪಟಾಕಿಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಫೋಟದ ಸ್ವರೂಪ ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ವಿಜೇಂದ್ರ ಗುಪ್ತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಟೀಕೆ
ರೋಹಿಣಿ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟ ಕುರಿತಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ‘
ಈ ಘಟನೆ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದನ್ನು ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ.
‘ದೆಹಲಿ ವಾಸಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.