ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು, ಸಾಕ್ಷಿಗಳ ಹೇಳಿಕೆಯನ್ನು ಗುರುವಾರ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸುವ ಕೆಲಹೊತ್ತಿಗೂ ಮುನ್ನ ಘಟನಾ ಸ್ಥಳದಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳ ಪಟ್ಟಿಯನ್ನು ಸಿಸಿಟಿವಿ ದೃಶ್ಯಗಳ ನೆರವಿನಿಂದ ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಶಬ್ದ ಕೇಳಿಸಿಕೊಂಡಿದ್ದಾಗಿ ಮತ್ತು ಹೊಗೆ ಆವರಿಸಿದ್ದನ್ನು ನೋಡಿದ್ದಾಗಿ ಹೇಳಿರುವ ಒಟ್ಟು 10 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಘಟನಾ ಸ್ಥಳದ ಸಮೀಪ ಸಕ್ರಿಯವಾಗಿದ್ದ ಮೊಬೈಲ್ ಫೋನ್‌ಗಳು ಹಾಗೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹಲವರನ್ನು ಗುರುತಿಸಲಾಗಿದೆ. ಆ ಪೈಕಿ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮತ್ತು ದೆಹಲಿ ಪೊಲೀಸ್ ಇಲಾಖೆಯ ವಿಧಿವಿಜ್ಞಾನ ತಜ್ಞರು ಸ್ಫೋಟದ ಸ್ಥಳದಲ್ಲಿ ದೊರೆತ ಕೆಲ ವಸ್ತುಗಳು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಿದ್ದಾರೆ. ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಅದಾದ ನಂತರ ಸ್ಫೋಟಕಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.