ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಂಜೆ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುತ್ತಿರುವ ಸಮಯದಲ್ಲಿಯೇ ಎರಡು ಕಿ.ಮೀ. ದೂರದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದೆ. ಸುಧಾರಿತ ಸ್ಫೋಟಕ ಸಾಧನದ (ಐಇಡಿ) ಸ್ಫೋಟದ ತೀವ್ರತೆ ಕಡಿಮೆ ಇದ್ದಿದ್ದರಿಂದ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ ವಿಂಡ್‌ಸ್ಕ್ರೀನ್‌ಗಳಿಗಷ್ಟೇ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವುದು ಅಥವಾ ಪ್ರಾಣ ಹಾನಿಯಾಗಿರುವುದು ವರದಿಯಾಗಿಲ್ಲ.
ಭಾರತ–ಇಸ್ರೇಲ್‌ನ ರಾಜತಾಂತ್ರಿಕ ಸಂಬಂಧಗಳಿಗೆ 29 ವರ್ಷಗಳು ಪೂರೈಸಿರುವ ದಿನದಂದೇ ಈ ಸ್ಫೋಟ ನಡೆದಿದೆ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಸಮೀಪ ಸಂಜೆ 5.05ಕ್ಕೆ ಸ್ಫೋಟ ಆಗಿದೆ. ಘಟನೆಯ ಬಳಿಕ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಹಾಗೂ ಮುಂಬೈನಲ್ಲೂ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಇಸ್ರೇಲ್‌ನ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಂಪೂರ್ಣ ಭದ್ರತೆ ಒದಗಿಸುವ ಭರವಸೆ ನೀಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದ್ದಾರೆ.
ಇಸ್ರೇಲ್, ಈ ಘಟನೆಯು 'ಉಗ್ರರ ಕೃತ್ಯ' ಎಂದಿದೆ.
ಸ್ಫೋಟದ ಸ್ಥಳದಿಂದ ಸುಮಾರು 2 ಕಿ.ಮೀ. ದೂರದ ವಿಜಯ್ ಚೌಕ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
2012ರಲ್ಲೂ ಆಗಿತ್ತು ಸ್ಫೋಟ
2012ರ ಫೆಬ್ರುವರಿ 13ರಂದು ಮೋಟಾರ್‌ಸೈಕಲ್‌ನಲ್ಲಿ ಬಂದ ಯುವಕನೊಬ್ಬ ಇಸ್ರೇಲ್ ರಾಯಭಾರ ಕಚೇರಿಯ ಕಾರು ಹಿಂಬಾಲಿಸಿ, ಸ್ಫೋಟಕಗಳನ್ನು ಇರಿಸಿದ್ದ. ಕೆಲವೇ ಸೆಕೆಂಡ್‌ಗಳಲ್ಲಿ ಕಾರು ಸ್ಫೋಟಗೊಂಡು ಹೊತ್ತು ಉರಿಯಿತು. ತನಿಖಾಧಿಕಾರಿಗಳು ಇರಾನ್‌ನ ಗುಪ್ತಚರರಿಂದ ಸ್ಫೋಟ ನಡೆದಿರುವುದಾಗಿ ಆರೋಪಿಸಿದರು. ಪತ್ರಕರ್ತ ಸೈಯದ್ ಮೊಹಮ್ಮದ್ ಅಹ್ಮದ್ ಕಜ್ಮಿ ಎಂಬುವವರನ್ನು ಬಂಧಿಸಿ, ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು. ಆದರೆ, ಬಾಂಬ್ ಇಟ್ಟ ವ್ಯಕ್ತಿಯನ್ನು ಈವರೆಗೂ ಬಂಧಿಸಲಾಗಿಲ್ಲ. ಆಗಿನ ಸ್ಫೋಟದಲ್ಲಿ ಮೂರು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ
ಸ್ಫೋಟ ಸಂಬಂಧಿಸಿದಂತೆ ಈವರೆಗಿನ ಮಾಹಿತಿ–
* ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಿಂದಾಲ್ ಹೌಸ್ ಸಮೀಪ ಸಂಜೆ 5:05ಕ್ಕೆ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ ಸಿಡಿದಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
* ನಿಲ್ಲಿಸಲಾಗಿದ್ದ ಮೂರು ಕಾರುಗಳಿಗೆ ಹಾನಿಯಾಗಿದೆ. ಕಾರುಗಳ ಗಾಜುಗಳು ಚೂರಾಗಿವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಬೇರೆ ಆಸ್ತಿಗಳಿಗೆ ಹಾನಿಯಾಗಿಲ್ಲ.
* ಕೋಲಾಹಲ ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಈ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ಪ್ರಾಥಮಿಕ ಪರಿಶೀಲನೆಯಿಂದಾಗಿ ಅಭಿಪ್ರಾಯ ಪಟ್ಟಿದ್ದಾರೆ.
* ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ದೆಹಲಿ ಪೊಲೀಸ್ ಕಮಿಷನರ್ ಎಸ್.ಎನ್.ಶ್ರೀವಾಸ್ತವ ಹಾಗೂ ಇಂಟೆಲಿಜೆನ್ಸ್ ಬ್ಯೂರೊ ಮುಖ್ಯಸ್ಥ ಅರವಿಂದ್ ಕುಮಾರ್ ಅವರು ಸ್ಫೋಟಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.
* ಎಲ್ಲ ವಿಮಾನ ನಿಲ್ದಾಣಗಳು, ಸರ್ಕಾರದ ಕಟ್ಟಡಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸಿಐಎಸ್‌ಎಫ್ ಸೂಚನೆ ನೀಡಿದೆ.
* ಭಾರತ–ಇಸ್ರೇಲ್ ರಾಜತಾಂತ್ರಿಕ ಸಂಬಂಧ 1992ರ ಜನವರಿ 29ರಿಂದ ಅಧಿಕೃತವಾಗಿ ಆರಂಭವಾಗಿತ್ತು. ಅದರ ವಾರ್ಷಿಕೋತ್ಸವದ ದಿನದಂದೇ ಈ ಘಟನೆ ನಡೆದಿದೆ.
* ಎನ್‌ಐಎ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ.
* ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ.
* ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಸ್ಫೋಟದ ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.