ಚೆನ್ನೈ: ಶಿಕ್ಷಕರಿಗೆ ಕೆಲವು ವಿದ್ಯಾರ್ಥಿಗಳು ಕುಚೇಷ್ಟೆ ಮಾಡುವುದು ಸಹಜ. ಆದರೆ, ಕೆಲ ವಿದ್ಯಾರ್ಥಿಗಳು ಈ ವಿಷಯದಲ್ಲಿ ಅತಿರೇಕದಿಂದ ವರ್ತಿಸಿ ತಮ್ಮ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಾರೆ.
ಇಂತಹದೇ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ. ರಾಸಿಪುರಂ ತಾಲೂಕಿನ ಪುದುಚೆಟ್ಟಿರಾಂ ಎಂಬ ಊರಿನ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳು ಅಂಧ ಶಿಕ್ಷಕರೊಬ್ಬರಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಸಮಾಜ ಶಾಸ್ತ್ರ ವಿಷಯದ ಅಂಧ ಶಿಕ್ಷಕರೊಬ್ಬರ ಎದುರು ವಿದ್ಯಾರ್ಥಿಗಳು ಮನಬಂದಂತೆ ನೃತ್ಯ ಮಾಡಿ, ಶಿಕ್ಷಕನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ಅವರ ಅಂಧತ್ವವನ್ನು ಅಣಕು ಮಾಡಿದ್ದಾರೆ. ಇಷ್ಟೇ ಅಲ್ಲದೇ ಘಟನೆಯನ್ನು ಕೆಲ ವಿದ್ಯಾರ್ಥಿಗಳು ವಿಡಿಯೊ ಮಾಡಿಕೊಂಡು ಫೇಸ್‌ಬುಕ್ ಗೆ ಹಾಕಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ನಾಮಕ್ಕಲ್ ಶಿಕ್ಷಣ ಅಧಿಕಾರಿಯನ್ನು ವಿಚಾರಿಸಿದ್ದರಿಂದ ಶಾಲಾಡಳಿತ ಮಂಡಳಿ ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ. ಅಲ್ಲದೇ ಪೋಷಕರಿಗೆ ನೋಟಿಸ್ ನೀಡಿದೆ ಎಂದು ಇಂಡಿಯನ್ ಎಕ್ಸಪ್ರೆಸ್ ಸುದ್ದಿ ತಾಣ ವರದಿ ಮಾಡಿದೆ.
ಅಂಧ ಶಿಕ್ಷಕನನ್ನು ಅವಮಾನಿಸಿದ ವಿದ್ಯಾರ್ಥಿಗಳ ಬಗ್ಗೆ ವ್ಯಾಪಕವಾದ ಖಂಡನೆ ವ್ಯಕ್ತವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.