ಚೆನ್ನೈ: ಇಲ್ಲಿನ ಈಸ್ಟ್‌ಕೋಸ್ಟ್ ರಸ್ತೆಯ ಬಳಿಯ ಕಡಲ ತೀರದಲ್ಲಿ ಭಾನುವಾರ ಸಂಜೆ ವಾಕಿಂಗ್ ಹೊರಟಿದ್ದವರಿಗೆ ಅಚ್ಚರಿಯೊಂದು ಕಾದಿತ್ತು. ಸಮುದ್ರದಲ್ಲಿ ಅಲೆಗಳ ಜೊತೆಗೆ ನೀಲಿ ಬಣ್ಣದ ಬೆಳಕಿನ ರೇಖೆಗಳು ಹರಿದು ಬಂದು ತೀರದಲ್ಲಿ ಲೀನವಾಗುತ್ತಿದ್ದ ದೃಶ್ಯ ಜನರನ್ನು ನಿಬ್ಬೆರಗಾಗಿಸಿತ್ತು. ಕಡಲ ತೀರದಲ್ಲಿ ಸೇರಿದ್ದ ಸಾವಿರಾರು ಜನರು ಈ ಅಪರೂಪದ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಚೆನ್ನೈ ಸಮುದ್ರ ತೀರದಲ್ಲಿ ಕಂಡುಬಂದ ಬೆಳಕಿನ ರೇಖೆಗಳ ಚಿತ್ರಗಳು ಮತ್ತು ವಿಡಿಯೊ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಕಡಲ ತೀರಕ್ಕೆ ಬಂದ ಜನರೆಲ್ಲ ಅಚ್ಚರಿಯಿಂದ ಈ ದೃಶ್ಯಗಳನ್ನು ಕಣ್ತುಂಬಿಸಿಕೊಂಡಿದ್ದರೆ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಮಾತ್ರ, ಈ ದೃಶ್ಯಗಳು ಸಾಗರ ಗರ್ಭದಲ್ಲಿ ‘ಎಲ್ಲವೂ ಸರಿ ಇಲ್ಲ’ ಎಂಬುದರ ಎಚ್ಚರಿಕೆಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಳಂನಿಂದ ತಿರುವನ್‌ಮಿಯೂರ್‌ವರೆಗೂ ಸಮುದ್ರ ತೀರದಲ್ಲಿ ನೀಲಿ ಬಣ್ಣದ ಬೆಳಕಿನ ರೇಖೆಗಳನ್ನು ಜನ ಗುರುತಿಸಿದ್ದಾರೆ. ಆದರೆ, ಎಲಿಯಟ್ಸ್ ಮತ್ತು ಪ್ರಸಿದ್ಧ ಮರಿನಾ ಬೀಚ್‌ನಲ್ಲಿ ಬೆಳಕಿನ ರೇಖೆಯ ಪ್ರಭಾವ ಕಡಿಮೆಯಿತ್ತು ಎನ್ನಲಾಗಿದೆ.
ಭಾರತದ ಕಡಲತೀರದಲ್ಲಿ ಇಂತಹ ದೃಶ್ಯ ಕಾಣಿಸಿರುವುದು ಇದೇ ಮೊದಲು ಎನ್ನಲಾಗಿದೆ. ಅಮೆರಿಕ, ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳ ಕಡಲ ತೀರಗಳಲ್ಲಿ ಇಂಥ ಬೆಳಕಿನ ರೇಖೆಗಳು ಆಗಾಗ ಕಂಡುಬರುತ್ತವೆ. ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ತಾಪಮಾನ ಹೆಚ್ಚಾಗುತ್ತಿರುವುದರ ಸೂಚನೆ ಇದಾಗಿದೆ ಎಂದೂ ಹೇಳಲಾಗುತ್ತಿದೆ.
‘ನೀಲಿ ಬೆಳಕು ಸೂಸುವ ಜೀವಿಗಳು ಸಮುದ್ರದಲ್ಲಿ ಮೀನಿನ ಸಂಖ್ಯೆಗಳ ಮೇಲೆ ಪರಿಣಾಮ ಬೀರಬಹುದು. ಅಮೋನಿಯ ಬಿಡುಗಡೆಯಿಂದಾಗಿ ಭಾರಿಪ್ರಮಾಣದಲ್ಲಿ ಮೀನುಗಳು ಸತ್ತಿರುವುದರ ಸಂಕೇತ ಇದಾಗಿರಬಹುದು. ಇದರಿಂದ ಸಮುದ್ರದ ಯಾವುದೋ ಭಾಗದಲ್ಲಿ ಮೀನುಗಳ ಸಂತತಿ ಕಡಿಮೆ ಆಗಿರಬಹುದು’ ಎಂದು ಸಂಶೋಧಕಿ ಪೂಜಾ ಅಭಿಪ್ರಾಯಪಟ್ಟಿದ್ದಾರೆ.
‘ಮೀನುಗಳ ಸಂತತಿ ಮೇಲೆ ಈ ಬೆಳವಣಿಗೆಯ ಪರಿಣಾಮ ಏನು ಎಂಬುದು ಮೂರು–ನಾಲ್ಕು ವಾರಗಳಲ್ಲಿ ತಿಳಿಯಬಹುದು’ ಎಂದಿರುವ ಇತರ ಕೆಲವು ಸಂಶೋಧಕರು, ‘ಇಂಥ ನೀಲಿ ರೇಖೆಗಳು ಸಾಮಾನ್ಯವಾಗಿ ಮೀನುಗಳ ಸಾವಿಗೆ ಕಾರಣವಾಗುತ್ತವೆ’ ಎಂದಿದ್ದಾರೆ.
ಅಪಾಯದ ಸಂಕೇತವೇ?
‘ಸಮುದ್ರದ ಆರೋಗ್ಯ ಸರಿಯಾಗಿಲ್ಲ ಎಂಬುದರ ಸೂಚನೆ ಇದಾಗಿರಬಹುದು. ಆಮ್ಲಜನಕದ ಕೊರತೆ ಇರುವ ಮತ್ತು ಸಾರಜನಕ, ರಂಜಕ ಮುಂತಾದ ವಸ್ತುಗಳು ಅಧಿಕವಾಗಿರುವ ಪ್ರದೇಶದಲ್ಲಿ ಸಾಮಾನ್ಯವಾಗಿ ಇಂಥ ನೀಲಿ ರೇಖೆಗಳು ಕಾಣಿಸುತ್ತವೆ. ಸಾಗರದ ಜೀವರಾಶಿಗಳ ದೃಷ್ಟಿಯಿಂದ ಇದು ಒಳ್ಳೆಯ ಸುದ್ದಿಯಲ್ಲ’ ಎಂದು ‘ಕೋಸ್ಟಲ್ ರಿಸೋರ್ಸ್ ಸೆಂಟರ್‘ನ ಸಂಶೋಧಕಿ ಪೂಜಾ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.