ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಹಾಗೂ ಆತನ ಸ್ನೇಹಿತರು ಭೇಟಿ ನೀಡಿದ್ದ ಮುಂಬೈನ ಜುಹು ಪ್ರದೇಶದಲ್ಲಿನ ‘ವೈಸ್ ಗ್ಲೋಬಲ್ ತಪಸ್’ ಬಾರ್‌ನ ಆಕ್ರಮಿತ ಭಾಗವನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಇಂದು ತೆರವುಗೊಳಿಸಿದೆ.
ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ್ ಶಾ ಪುತ್ರ ಮಿಹಿರ್ ಶಾ ಚಾಲನೆ ಮಾಡುತ್ತಿದ್ದರು ಎನ್ನಲಾದ ಬಿಎಂಡಬ್ಲ್ಯು ಕಾರು ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಗಾಯಗೊಂಡಿದ್ದರು.
ಮೃತರನ್ನು ವರ್ಲಿ ನಿವಾಸಿ ಕಾವೇರಿ ನಖವಾ (45) ಎಂದು ಗುರುತಿಸಲಾಗಿದ್ದು, ಅವರ ಪತಿ ಪ್ರದೀಕ್ ನಖವಾ (50) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಾಯಿದೆಯ ಸೆಕ್ಷನ್ 351 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಅಕ್ರಮವಾಗಿ ನಿರ್ಮಿಸಿದ್ದ ಬಾರ್‌ನ ಭಾಗವನ್ನು ನೆಲಸಮಗೊಳಿಸಿದ್ದಾರೆ.
ತನ್ನ ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಮಿಹಿರ್ ಭೇಟಿ ನೀಡಿದ್ದ ಮುಂಬೈನ ಜುಹು ಪ್ರದೇಶದಲ್ಲಿನ ಬಾರ್‌ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ಬೀಗ ಹಾಕಿದ್ದರು.
ಮಹಾರಾಷ್ಟ್ರದಲ್ಲಿ 25 ವರ್ಷ ಪೂರ್ಣಗೊಂಡವರು ಮಾತ್ರ ಮದ್ಯ ಸೇವಿಸಬಹುದು ಎಂಬ ಕಾನೂನಿದೆ. ಮಿಹಿರ್‌ಗೆ 24 ವರ್ಷ ತುಂಬದಿದ್ದರೂ ಬಾರ್‌ನಲ್ಲಿ ಮದ್ಯ ನೀಡಲಾಗಿದೆ. ನಿಯಮ ಉಲ್ಲಂಘಿಸಿರುವುದರಿಂದ ಜಿಲ್ಲಾಧಿಕಾರಿ ಆದೇಶದಂತೆ ಬಾರ್ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.