ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸುವ ಕೆಲವೇ ಗಂಟೆಗಳ ಮೊದಲು ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿಗೆ ₹29 ಸಾವಿರ ಕೋಟಿ ದೀಪಾವಳಿ ಬೋನಸ್ ಅನ್ನು ಅಲ್ಲಿನ ಸರ್ಕಾರ ಮಂಗಳವಾರ ಘೋಷಿಸಿದೆ.
ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಎಂದೇ ಕರೆಯಲಾಗುವ ಬಿಎಂಸಿಯ ವಾರ್ಷಿಕ ಬಜೆಟ್ ಗಾತ್ರ ₹53 ಸಾವಿರ ಕೋಟಿ. ಪಾಲಿಕೆ ಚುನಾವಣೆ ಬಾಕಿ ಇರುವುದರಿಂದ, ಸದ್ಯ ರಾಜ್ಯ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿ ಮೂಲಕ ಪಾಲಿಕೆ ಕಾರ್ಯ ನಿರ್ವಹಿಸುತ್ತಿದೆ.
ಪಾಲಿಕೆಯಲ್ಲಿ ಸುಮಾರು 92 ಸಾವಿರ ನೌಕರರು ಇದ್ದಾರೆ. ಈ ಬಾರಿ ಎಕ್ಸ್‌ಗ್ರೇಷಿಯಾ ಶೇ 11.53ಕ್ಕೆ ನಿಗದಿಪಡಿಸಲಾಗಿದೆ. 2023ರಲ್ಲಿ ₹26 ಸಾವಿರ ಕೋಟಿ ಬೋನಸ್ ಘೋಷಿಸಲಾಗಿತ್ತು. ಪಾಲಿಕೆ ಆಯುಕ್ತ– ಆಡಳಿತಾಧಿಕಾರಿ ಭೂಷಣ್ ಗಗ್ರಾನಿ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಪರಸ್ಪರ ಚರ್ಚಿಸಿ, ಈ ಘೋಷಣೆ ಮಾಡಿದ್ದಾರೆ ಎಂದೆನ್ನಲಾಗಿದೆ.
ಪಾಲಿಕೆ ನೌಕರರು, ಪಾಲಿಕೆ ಒಡೆತನದ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಅಲ್ಲಿನ ಸಿಬ್ಬಂದಿ, ಅನುದಾನ ಸ್ವೀಕರಿಸುವವರು ಹಾಗೂ ಸ್ವೀಕರಿಸದವರಿಗೂ ಏಕರೂಪದ ಬೋನಸ್ ಸಿಗಲಿದೆ. ಸಮುದಾಯ ಆರೋಗ್ಯ ಕಾರ್ಯಕರ್ತೆಯರು ಹಾಗೂ ಬಾಲವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ಕ್ರಮವಾಗಿ ₹12 ಸಾವಿರ ಹಾಗೂ ₹ 5 ಸಾವಿರದಷ್ಟು ‘ಭಾವುಬೀಜ್ ಉಡುಗೊರೆ’ (ಸೋದರಿಗೆ ಸೋದರ ನೀಡುವ ಉಡುಗೊರೆ) ಸಿಗಲಿದೆ ಎಂದು ವರದಿಯಾಗಿದೆ.
ನ. 20ರಂದು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.