ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಜಂಟಿ ಆಯುಕ್ತ ರಮೇಶ್ ಪವಾರ್ ಅವರು ನೀರು ಎಂದು ಭಾವಿಸಿ ಸ್ಯಾನಿಟೈಸರ್ ಕುಡಿದಿರುವ ಘಟನೆ ಬುಧವಾರ ನಡೆದಿದೆ. ಪಾಲಿಕೆಯ ಶಿಕ್ಷಣ ಬಜೆಟ್ ಮಂಡಣೆ ವೇಳೆ ಈ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಅವರು, ತಮ್ಮ ಟೇಬಲ್ ಮುಂದೆ ಸ್ಯಾನಿಟೈಸರ್ ಮತ್ತು ನೀರಿನ ಬಾಟಲಿಗಳನ್ನು ಇಡಲಾಗಿತ್ತು. ಎರಡೂ ಒಂದೇರೀತಿಯಲ್ಲಿ ಇದ್ದುದರಿಂದ ಹೀಗಾಯಿತು ಎಂದು ಹೇಳಿದ್ದಾರೆ.
‘ನನ್ನ ಭಾಷಣ ಆರಂಭಿಸುವ ಮುನ್ನ ನೀರು ಕುಡಿಯಬೇಕು ಎಂದು ಭಾವಿಸಿದೆ. ಎರಡೂ ಬಾಟಲಿಗಳು ಒಂದೇರೀತಿ ಇದ್ದ ಕಾರಣ ಆಕಸ್ಮಿಕವಾಗಿ ಸ್ಯಾನಿಟೈಸರ್ ಬಾಟಲಿ ತೆಗೆದುಕೊಂಡೆ. ಒಂದು ಗುಟುಕು ಕುಡಿಯುತ್ತಿದ್ದಂತೆ ತಪ್ಪಿನ ಅರಿವಾಯಿತು. ಅದನ್ನು ಗುಟುಕಿಸಿಕೊಳ್ಳದೆ ಹೊರಚೆಲ್ಲಿದೆ’ ಎಂದು ತಿಳಿಸಿದ್ದಾರೆ.
ತಕ್ಷಣವೇ ಸಭೆಯಿಂದ ಹೊರನಡೆದ ಅವರು, ಕೆಲ ಸಮಯದ ನಂತರ ವಾಪಸ್ ಆಗಿ ಬಜೆಟ್ ಮಂಡಿಸಿದ್ದಾರೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.