ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಗೊತ್ತಾಗದೆ ನೀರೆಂದು ತಪ್ಪಾಗಿ ಭಾವಿಸಿ ಸ್ಯಾನಿಟೈಸರ್ ಕುಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮಹಾನಗರ ಪಾಲಿಕೆಯ ಸಹಾಯಕ ಮುನ್ಸಿಪಲ್ ಕಮಿಷನರ್ ರಮೇಶ್ ಪವಾರ್ ಅವರು ಶಿಕ್ಷಣ ಬಜೆಟ್ ಮಂಡಿಸುವಾಗ ಮೇಜಿನ ಮೇಲಿದ್ದ ಸ್ಯಾನಿಟೈಸರ್ ಅನ್ನು ನೀರೆಂದು ಭಾವಿಸಿ ಒಂದು ಗುಟುಕು ಕುಡಿದಿದ್ದರು. ಸ್ಯಾನಿಟೈಸರ್ ಎನ್ನುವುದು ಗೊತ್ತಾದ ತಕ್ಷಣವೇ ಅವರು ಸಭಾಂಗಣದಿಂದ ಹೊರ ನಡೆದು ಅದನ್ನು ಉಗುಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ಅಧಿಕಾರಿಗಳು ಹೇಳುವ ಪ್ರಕಾರ, ಸ್ಯಾನಿಟೈಸರ್ ಮತ್ತು ನೀರಿನ ಬಾಟಲಿಗಳ ಗಾತ್ರ ಮತ್ತು ಬಣ್ಣವು ಒಂದೇ ರೀತಿ ಇದ್ದ ಕಾರಣ ಪವಾರ್ ಅವರು ಗೊತ್ತಾಗದೆ ಸ್ಯಾನಿಟೈಸರ್ ಕುಡಿದಿದ್ದಾರೆ.
ಅಧಿಕಾರಿಯು ಸ್ಯಾನಿಟೈಸರ್ ಕುಡಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಧಿಕಾರಿಯು ಬಾಟಲಿಯ ಬಿಳಿ ಮುಚ್ಚಳ ತೆರೆದು ಒಂದು ಗುಟುಕು ಸ್ಯಾನಿಟೈಸರ್ ಕುಡಿದಿರುವ ದೃಶ್ಯದ ತುಣುಕು ಈ ವಿಡಿಯೊದಲ್ಲಿದೆ.
ಸ್ಯಾನಿಟೈಸರ್ ಉಗುಳಿ ಸಭಾಂಗಣಕ್ಕೆ ಕೆಲವೇ ನಿಮಿಷಗಳಲ್ಲಿ ಮರಳಿದ ಪವಾರ್ ಅವರು, 2021–22 ಸಾಲಿಗೆ ₹2,945.78 ಕೋಟಿಯ ಶಿಕ್ಷಣ ಬಜೆಟ್ ಮಂಡಿಸಿದರು.
ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು 12 ಮಕ್ಕಳಿಗೆ ಪೋಲಿಯೊ ಲಸಿಕೆ ಬದಲು ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ಹಾಕಿ ಪ್ರಮಾದ ಎಸಗಿದ ಘಟನೆ ಮೂರು ದಿನಗಳ ಹಿಂದಷ್ಟೇ ನಡೆದಿತ್ತು. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆ ಮಕ್ಕಳೆಲ್ಲರೂ ಚೇತರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.