ನವದೆಹಲಿ: ಸಾರ್ವಜನಿಕ ವಲಯದ ಘಟಕಗಳಿಗೆ (ಪಿಎಸ್‌ಯುಎಸ್) ಬಂಡವಾಳ ಹಿಂತೆಗೆತ ನೀತಿ ಅನುಸರಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 15ರಿಂದ ನವೆಂಬರ್ 11ರವರೆಗೆ ಹಂತಹಂತವಾಗಿ ಆಂದೋಲನ ನಡೆಸುವುದಾಗಿ ಆರ್‌ಎಸ್‌ಎಸ್ ಅಂಗಸಂಸ್ಥೆ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಶನಿವಾರ ಪ್ರಕಟಿಸಿದೆ.
ಹೈದರಾಬಾದ್‌ನಲ್ಲಿ ಶುಕ್ರವಾರ ಮುಕ್ತಾಯಗೊಂಡ ಬಿಎಂಎಸ್‌ನ ಪಿಎಸ್‌ಯುಎಸ್ ಸಮನ್ವಯ ಸಮಿತಿಯ ಎರಡು ದಿನಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಉದ್ಯಮವಾರು ವಿಚಾರ ಸಂಕಿರಣಗಳು ಮಾರ್ಚ್ 15ರಿಂದ ಏಪ್ರಿಲ್ 14 ರವರೆಗೆ ನಡೆಯಲಿದ್ದು, ಮೇ ತಿಂಗಳಲ್ಲಿ ಘಟಕ ಮಟ್ಟದ ಕಾರ್ಯಾಗಾರಗಳು, ಜೂನ್ 14ರಿಂದ ಜೂನ್ 20ರವರೆಗೆ ಸಾಮೂಹಿಕ ಜಾಗೃತಿ ಅಭಿಯಾನ ನಡೆಯಲಿದೆ.
ನಾಲ್ಕನೇ ಹಂತದ ಆಂದೋಲನವಾಗಿ ಜುಲೈ 15ರಂದು ಘಟಕ ಮಟ್ಟದ ಸಾಮೂಹಿಕ ಧರಣಿ, ಐದನೇ ಹಂತವಾಗಿ ಸೆ.20 ಮತ್ತು ಸೆ.30ರ ನಡುವೆ ರಾಜ್ಯಮಟ್ಟದ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಆರನೇ ಮತ್ತು ಅಂತಿಮ ಹಂತದ ಆಂದೋಲನ ನವೆಂಬರ್ 23ರಂದು ನಡೆಯಲಿದ್ದು, ಎಲ್ಲ ಸಾರ್ವಜನಿಕ ವಲಯಗಳ ಘಟಕಗಳ ಕಾರ್ಪೊರೇಟ್ ಕಚೇರಿಗಳ ಎದುರು ಬಿಎಂಎಸ್ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಲಿದೆ.
ಇದಕ್ಕಾಗಿ ಬ್ಯಾಂಕಿಂಗ್, ವಿಮೆ, ಟೆಲಿಕಾಂ, ತೈಲ, ವಿದ್ಯುತ್, ಕಲ್ಲಿದ್ದಲು, ನಾನ್‌ಕೋಲ್, ಎಂಜಿನಿಯರಿಂಗ್, ರಕ್ಷಣಾ ಉತ್ಪಾದನಾ ಘಟಕಗಳು, ರೈಲ್ವೆ, ಅಂಚೆ, ಬಂದರುಗಳು, ಶಿಪ್‌ಯಾರ್ಡ್‌ಗಳು, ವಿಮಾನ ನಿಲ್ದಾಣಗಳು ಮತ್ತು ಏರ್ ಇಂಡಿಯಾ ಕ್ಷೇತ್ರದಲ್ಲಿನ ಸಿಪಿಎಸ್‌ಇಗಳನ್ನು ಒಳಗೊಂಡ ಸಮನ್ವಯ ಸಮಿತಿಯ ವಿಶೇಷ ಸಭೆ ನಡೆಸಲು ಬಿಎಂಎಸ್ ನಿರ್ಧರಿಸಿದೆ.
ಸಮನ್ವಯ ಸಮಿತಿ ಸಭೆಯಲ್ಲಿ ಬಿಎಂಎಸ್ ಅಧ್ಯಕ್ಷ ಎಚ್.ಜೆ. ಪಾಂಡ್ಯ, ಪ್ರಧಾನ ಕಾರ್ಯದರ್ಶಿ ಬಿನಾಯ್ ಕುಮಾರ್ ಸಿನ್ಹಾ ಮತ್ತು ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್ ಪಾಲ್ಗೊಂಡಿದ್ದರು.
ಸಾರ್ವಜನಿಕ ವಲಯದ ಕ್ಷೇತ್ರಗಳಿಂದ ಬಂಡವಾಳ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣ ಹಾಗೂ ಸಾರ್ವಜನಿಕ ಉದ್ಯಮದ ಅಮೂಲ್ಯ ಆಸ್ತಿಯಿಂದ ಹಣ ಗಳಿಕೆ ಸಂಬಂಧ ಕೇಂದ್ರದ ನೀತಿಗಳನ್ನು ಬಿಎಂಎಸ್ ಬಲವಾಗಿ ವಿರೋಧಿಸಬೇಕೆಂಬ ತೀರ್ಮಾನ ಈ ಸಭೆಯಲ್ಲಿ ಒಮ್ಮತದಿಂದ ಮೂಡಿಬಂದಿದೆ.
ಪಿಎಸ್‌ಯುಗಳ ವಿರುದ್ಧ ಸರ್ಕಾರ ಬಜೆಟ್‌ನಲ್ಲಿ ತೋರಿರುವ ಅಸಡ್ಡೆಯ ಕುರಿತು ಚೆನ್ನೈನಲ್ಲಿ ಬಿಎಂಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆದ ಹತ್ತು ದಿನಗಳ ನಂತರ ಹೈದರಾಬಾದ್‌ನಲ್ಲಿ ಈ ಮಹತ್ವದ ಸಭೆ ನಡೆದಿದೆ.
ಸಾರ್ವಜನಿಕ ವಲಯದ ಕಾರ್ಯತಂತ್ರ ಮತ್ತು ಕಾರ್ಯತಂತ್ರರಹಿತ ಘಟಕಗಳ ಹೆಸರಿನಲ್ಲಿ ಹೂಡಿಕೆ ಹಿಂತೆಗೆತದ ಕ್ರಮವನ್ನು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಅಮೂಲ್ಯ ಆಸ್ತಿಗಳಿಂದ ಹಣ ಗಳಿಕೆಗೆ ಸಂಬಂಧಿಸಿದಂತೆ ಸರ್ಕಾರದ ನೀತಿಯನ್ನು ಸರ್ವಾನುಮತದಿಂದ ವಿರೋಧಿಸಲು ಚೆನ್ನೈನಲ್ಲಿ ನಡೆದ ಬಿಎಂಎಸ್ ಕಾರ್ಯಕಾರಿಣಿಯಲ್ಲೂ ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.