ಮುಂಬೈ: ಮುಂಬೈನಲ್ಲಿ ನಡೆದಿದ್ದ ಬಿಎಂಡಬ್ಲ್ಯು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಮಿಹಿರ್‌ನನ್ನು ಪೊಲೀಸರು ಮಂಗಳವಾರ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ ಭೋಸಲೆ ಅವರ ಎದುರು ಹಾಜರುಪಡಿಸಿದ್ದರು.
ತಲೆಮರೆಸಿಕೊಂಡಿದ್ದ ವೇಳೆ ನೆರವು ನೀಡಿದವರು ಮತ್ತು ಕಾಣೆಯಾಗಿರುವ ವಾಹನದ ಸಂಖ್ಯಾ ಫಲಕದ ಬಗ್ಗೆ ಮಿಹಿರ್ ಸರಿಯಾದ ಮಾಹಿತಿ ನೀಡದಿರುವ ಕಾರಣ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದ್ದರು.
ಜುಲೈ 7ರಂದು ಮುಂಬೈನ ವರ್ಲಿ ನಗರದಲ್ಲಿ ಮಿಹಿರ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ದ್ವಿಚಕ್ರವಾಹನವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದ್ವಿಚಕ್ರವಾಹನದಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಪಘಾತ ನಡೆದು ಎರಡು ದಿನಗಳ ಬಳಿಕ ಜುಲೈ 9ರಂದು ಮಿಹಿರ್‌ನನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.