ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಜುಲೈ 7ರಂದು ಮುಂಬೈನ ವರ್ಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿತ್ತು. ಮಿಹಿರ್ ಚಲಾಯಿಸುತ್ತಿದ್ದ ಎನ್ನಲಾದ ಬಿಎಂಡಬ್ಲ್ಯು ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿದ ಪರಿಣಾಮ ಕಾವೇರಿ ನಖ್ವಾ (45) ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಪತಿ ಪ್ರದೀಪ್ ನಖ್ವಾ(50) ಅವರಿಗೆ ಗಾಯಗಳಾಗಿದ್ದವು. ಘಟನೆ ನಡೆದು 2 ದಿನಗಳ ನಂತರ ಜುಲೈ 9 ರಂದು ಮಿಹಿರ್‌ನನ್ನು ಬಂಧಿಸಲಾಗಿತ್ತು.
ಮಿಹಿರ್‌ನನ್ನು ಪೊಲೀಸರು ಇಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ.ಭೋಸಲೆ ಅವರ ಮುಂದೆ ಹಾಜರುಪಡಿಸಿದರು. ಆರೋಪಿ ಪರಾರಿಯಾಗಿದ್ದ ವೇಳೆ ತನಗೆ ಆಶ್ರಯ ನೀಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಆತನ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿದರು. ಅಲ್ಲದೇ ಕಾರಿನ ನಂಬರ್ ಪ್ಲೇಟ್ ಕಾಣೆಯಾಗಿರುವ ಬಗ್ಗೆ ಆತ ಇನ್ನೂ ಮಾಹಿತಿ ನೀಡಿಲ್ಲ ಎಂದು ಸರ್ಕಾರಿ ವಕೀಲರಾದ ರವೀಂದ್ರ ಪಾಟೀಲ್ ಮತ್ತು ಭಾರತಿ ಭೋಸ್ಲೆ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿದರು.
ಮಿಹಿರ್ ಪರ ಪ‍್ರತಿವಾದ ಮಂಡಿಸಿದ ವಕೀಲರಾದ ಆಯುಷ್ ಪಾಸ್ಬೋಲಾ ಮತ್ತು ಸುಧೀರ್ ಭಾರದ್ವಾಜ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದು. ಪೊಲೀಸರು 27 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಆರೋಪಿ ತಲೆಮರೆಸಿಕೊಂಡಿರುವಾಗ ಯಾರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳಿಗೆ ಸಾಕಷ್ಟು ಸಮಯ ನೀಡಲಾಗಿದೆ ಎಂದು ಹೇಳಿದರು.
ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.