ಮುಂಬೈ: ‘ಬಿಎಂಡಬ್ಲ್ಯು ಕಾರು ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ಶಿವಸೇನಾ ನಾಯಕ ರಾಜೇಶ್ ಶಾ ಅವರ ಮಗ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರು ಮದ್ಯ ಕುಡಿದಿದ್ದರು’ ಎಂದು ಮುಂಬೈ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖಾ ತಂಡವು ಅಪಘಾತವನ್ನು ಗುರುವಾರ ನಸುಕಿನಲ್ಲಿ ಮರುಸೃಷ್ಟಿ ಮಾಡಿತು. ‘ಅಪಘಾತ ಸಂಭವಿಸಿದ ಕುರಿತು, ಇದಕ್ಕೆ ಪೂರಕವಾಗಿ ನಡೆದ ಘಟನಾವಳಿಗಳ ಕುರಿತು ಮಿಹಿರ್ ಶಾ ಹಾಗೂ ಅವರ ಕಾರು ಚಾಲಕ ರಾಜ್‌ರಿಷಿ ಬಿದಾವತ್ ಅವರಿಗೆ ಇದೇ ವೇಳೆ ಪ್ರಶ್ನೆಗಳನ್ನೂ ಕೇಳಲಾಯಿತು’ ಎಂದರು.
ಮಿಹಿರ್ ಶಾ, ಅವರ ತಂದೆ ಶಿವಸೇನಾ ನಾಯಕ ರಾಜೇಶ್ ಶಾ ಹಾಗೂ ಇವರ ಕಾರು ಚಾಲಕ ಬಿದಾವತ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಕೊಲೆಯಲ್ಲದ, ಅಜಾಗರೂಕತೆಯಿಂದ ಸಂಭವಿಸಿದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಂಗ ಬಂಧನಕ್ಕೆ: ಕಾರು ಚಾಲಕ ಬಿದಾವತ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ. ಬಿದಾವತ್ ಅವರ ಪೊಲೀಸ್ ಕಸ್ಟಡಿ ಅವಧಿಯು ಗುರುವಾರಕ್ಕೆ ಮುಕ್ತಾಯವಾಗಿತ್ತು. ‘ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ. ಬಿದಾವತ್ ಅವರನ್ನು ತಮ್ಮ ವಶಕ್ಕೆ ನೀಡಿ’ ಎಂದು ಪೊಲೀಸರು ಮನವಿ ಮಾಡಿದರು. ಆದರೆ, ನ್ಯಾಯಾಲಯವು ಬಿದಾವತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.