ಗ್ಯಾಂಗ್ಟಕ್: ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ. ಪೌಡ್ಯಾಲ್ ಅವರ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
80 ವರ್ಷದ ಪೌಡ್ಯಾಲ್ ಅವರ ಮೃತದೇಹ ಮಂಗಳವಾರ ಫೂಲ್‌ಭರೀಯ ತಿಸ್ತಾ ಕಾಲುವೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂಬತ್ತು ದಿನಗಳ ಹಿಂದೆ, ಜುಲೈ 7ರಂದು ಪಾಕ್ಯಾಂಗ್ ಜಿಲ್ಲೆಯ ಚೋಟಾ ಸಿಂಗ್ಟಮ್ ನಿವಾಸಿಯಾದ ಪೌಡ್ಯಾಲ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು.
ಮೃತದೇಹವನ್ನು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಸಿಕ್ಕಿಂ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಪೌಡ್ಯಾಲ್ ಅವರು ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ರಾಜ್ಯದ ಅರಣ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಸಿಕ್ಕಿಂನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳ ಬಗ್ಗೆ ಅಪಾರ ಅರಿವು ಹೊಂದಿದ್ದ ಅವರು 80ರ ದಶಕದಲ್ಲಿ ರೈಸಿಂಗ್ ಸನ್ ಪಾರ್ಟಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್.ಪ್ರೇಮ್ ಸಿಂಗ್ ತಮಾಂಗ್ ಅವರು ಪೌಡ್ಯಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.