ಮನಾಲಿ/ ಶಿಮ್ಲಾ : ‘ಸೆಪ್ಟೆಂಬರ್ 28ರಂದು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಚಾರಣಿಗರೊಬ್ಬರು ಮನಾಲಿ ಅರಣ್ಯದಲ್ಲಿನ ಜೋಗಿನಿ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
‘ಬೆಂಗಳೂರಿನ ರಾಹುಲ್ ರಮೇಶ್ (35) ಮೃತಪಟ್ಟ ಚಾರಣಿಗ. ರಕ್ಷಣಾ ತಂಡಕ್ಕೆ ಮೃತದೇಹ ಮಂಗಳವಾರವೇ ದೊರಕಿತ್ತಾದರೂ, ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ರಮೇಶ್ ಅವರು ಇಲ್ಲಿನ ಕಡಿದಾದ ಬಂಡೆ ಮೇಲಿಂದ ಕಾಲು ಜಾರಿ ಬಿದ್ದಿರಬಹುದು. ಈ ಬಂಡೆಯಿಂದ 400 ಮೀಟರ್ ದೂರದಲ್ಲಿ ಅವರ ಮೃತದೇಹ ದೊರೆತಿದೆ’ ಎಂದು ಮನಾಲಿಯ ಡಿಎಸ್‌ಪಿ ಕೆ.ಡಿ. ಶರ್ಮಾ ಅವರು ತಿಳಿಸಿದರು.
‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಅಂಡ್ ಅಲೈಡ್ ಸ್ಪೋರ್ಟ್ಸ್, ಪೊಲೀಸರು ಮತ್ತು ಸ್ಥಳೀಯ ಪರ್ವತಾರೋಹಿಗಳ ರಕ್ಷಣಾ ತಂಡದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ’ ಎಂದರು.
‘ರಾಹುಲ್ ರಮೇಶ್ ಅವರು ಮ್ಯಾರಥಾನ್ ಸೋಲಾಂಗ್ ಸ್ಕೈಲ್ಟ್ರಾ ಸ್ಪರ್ಧೆಯಲ್ಲಿ ಭಾಗವಹಿಸಲು ಮನಾಲಿಗೆ ಬಂದಿದ್ದರು. ಈ ಸ್ಪರ್ಧೆಯನ್ನು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ನಿಗದಿಪಡಿಸಲಾಗಿತ್ತು. ಭ್ರಿಗು ಸರೋವರದಿಂದ ಹಿಂತಿರುಗುತ್ತಿದ್ದಾಗ ರಾಹುಲ್ ರಮೇಶ್ ದಾರಿ ತಪ್ಪಿದ್ದರು. ಸೆಪ್ಟೆಂಬರ್ 29ರಂದು ಅವರ ಮೊಬೈಲ್ ಜೋಗಿನಿ ಜಲಪಾತದ ಬಳಿಯ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿನ ಫೋಟೊ ಹಾಗೂ ಸಂದೇಶಗಳನ್ನು ಪರಿಶೀಲಿಸಿದಾಗ ರಾಹುಲ್ ಅವರು ಸರೋವರದಿಂದ ಮರಳುವಾಗ ದಾರಿ ತಪ್ಪಿದ್ದಾರೆ. ಈ ಕುರಿತು ರಾಹುಲ್ ತಮ್ಮ ಸಹೋದರನಿಗೂ ಸಂದೇಶ ಕಳುಹಿಸಿದ್ದರು’ ಎಂದು ಶರ್ಮಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.