ನವದೆಹಲಿ: ‘ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಭಾರತದ ಫೋಟೋ ಜರ್ನಲಿಸ್ಟ್, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಷ್ ಸಿದ್ಧಿಕಿ ಅವರ ಮೃತದೇಹವನ್ನು ಅತ್ಯಂತ ಭೀಕರವಾಗಿ ವಿರೂಪಗೊಳಿಸಲಾಗಿತ್ತು. ತಾಲಿಬಾನ್ ವಶದಲ್ಲಿದ್ದಾಗಲೇ ಹೀಗೆ ಆಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿವೆ. ಹೀಗಾಗಿ ಸರ್ಕಾರ ಮತ್ತು ತಾಲಿಬಾನಿ ಪಡೆಗಳ ನಡುವಿನ ಕಾಳಗ ಘೋರ ಪರಿಸ್ಥಿತಿಗೆ ತಲುಪಿದೆ. ಈ ಮಧ್ಯೆ ಡ್ಯಾನಿಷ್ ಸಿದ್ಧಿಕಿ ಅವರ ದೇಹ ವಿರೂಪಗೊಂಡಿದ್ದ ವಿಷಯವೂ ಬಹಿರಂಗಗೊಂಡಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹಲವು ಸ್ಮರಣೀಯ ಛಾಯಾಚಿತ್ರಗಳನ್ನು ತೆಗೆದು, ಪ್ರಶಂಸೆಗೆ ಪಾತ್ರರಾಗಿದ್ದ ಡ್ಯಾನಿಷ್ ಸಿದ್ಧಿಕಿ, ಜುಲೈ 16 ರ ಬೆಳಿಗ್ಗೆ ಕೊಲ್ಲಲ್ಪಟ್ಟಿದ್ದರು. ಆಗಷ್ಟೇ ತಾಲಿಬಾನಿಗಳು ವಶಕ್ಕೆ ಪಡೆದಿದ್ದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅವರು ಹತರಾಗಿದ್ದರು.
ಹತ್ಯೆಯ ಆರಂಭದಲ್ಲಿ ಸಿಕ್ಕಿದ್ದ ಫೋಟೊಗಳ ಪ್ರಕಾರ ಸಿದ್ಧಿಕಿ ಅವರ ದೇಹದ ಮೇಲೆ ಆನೇಕ ಗಾಯಗಳಾಗಿದ್ದವಾದರೂ, ದೇಹ ವಿರೂಪವಾಗಿರಲಿಲ್ಲ. ಅದೇ ದಿನ ಸಂಜೆಯ ವೇಳೆಗೆ, ಸಿದ್ಧಿಕಿ ಶರೀರವನ್ನು ರೆಡ್ ಕ್ರಾಸ್‌ಗೆ ಹಸ್ತಾಂತರಿಸಲಾಗಿತ್ತು. ಕಂದಹಾರ್‌ನ ಆಸ್ಪತ್ರೆಗೆ ದೇಹವನ್ನು ಸಾಗಿಸಲಾಗಿತ್ತು. ಆಗ ಸಿದ್ಧಿಕಿ ಅವರ ದೇಹ ವಿರೂಪಗೊಂಡಿರುವುದು ಬಹಿರಂಗವಾಗಿತ್ತು’ ಎಂದು ಇಬ್ಬರು ಭಾರತೀಯ ಅಧಿಕಾರಿಗಳು ಮತ್ತು ಇಬ್ಬರು ಅಫ್ಗನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ಧಿಕಿ ದೇಹದಲ್ಲಿ ಸುಮಾರು ಒಂದು ಡಜನ್ ಗುಂಡುಗಳಿದ್ದವು. ಅದರಿಂದ ಅವರ ದೇಹ ತೀವ್ರ ಗಾಸಿಗೊಂಡಿತ್ತು. ಅಲ್ಲದೆ, ಸಿದ್ಧಿಕಿ ಮುಖ ಮತ್ತು ಎದೆಯ ಮೇಲೆ ವಾಹನದ ಚಕ್ರಗಳ ಗುರುತುಗಳಿದ್ದವು ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆಯ ಕೆಲ ಸಿಬ್ಬಂದಿ, ‘ಸಿದ್ಧಿಕಿ ಅವರ ದೇಹವನ್ನು ಆಸ್ಪತ್ರೆಗೆ ತಂದಾಗ ಅವರ ಮುಖ ಗುರುತು ಹಿಡಿಯಲಾರದಂಥ ಸ್ಥಿತಿಯಲ್ಲಿತ್ತು. ಅವರಿಗೆ ಏನು ಮಾಡಲಾಗಿತ್ತು ಎಂದು ಅಂದಾಜು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಆದರೆ, ಈ ಆರೋಪವನ್ನು ನಿರಾಕರಿಸಿರುವ ತಾಲಿಬಾನ್ ವಕ್ತಾರರು, ‘ಘರ್ಷಣೆ ವೇಳೆ ಮೃತಪಟ್ಟವರ ದೇಹಗಳನ್ನು ನಾವು ಗೌರವದಿಂದ ಕಾಣುತ್ತೇವೆ. ನಂತರ ಶರೀರವನ್ನು ಸ್ಥಳೀಯ ಹಿರಿಯರಿಗೆ ಅಥವಾ ರೆಡ್ ಕ್ರಾಸ್‌ಗೆ ಹಸ್ತಾಂತರಿಸುತ್ತೇವೆ,‘ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.