ನವದೆಹಲಿ: ಭಾರತೀಯ ಸೇನೆಯ ಬೇಡಿಕೆಯಂತೆ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಹೇಳಿದೆ.
ಒಟ್ಟು ಆರು ಎಎಚ್–64ಇ ಅಪಾಚೆಗಳನ್ನು ಭಾರತೀಯ ಸೇನೆಗಾಗಿ ಬೋಯಿಂಗ್ ಸಿದ್ಧಪಡಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುದ್ಧ ಹೆಲಿಕಾಪ್ಟರ್ ಆಗಿರುವ ಇದು, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಪ್ರಸಿದ್ಧಿ ಪಡೆದಿದೆ. ಸದ್ಯ ಈ ಮಾದರಿಯನ್ನು ಅಮೆರಿಕ ಸೇನೆ ಬಳಸುತ್ತಿದೆ. ಮೆಸಾ ಹಾಗೂ ಆರಿಝೋನಾದಲ್ಲಿರುವ ತಯಾರಿಕಾ ಘಟಕಗಳಲ್ಲಿ ಭಾರತೀಯ ಸೇನೆಯ ಈ ನೂತನ ಹೆಲಿಕಾಪ್ಟರ್‌ಗಳು ಸಿದ್ಧಗೊಳ್ಳುತ್ತಿವೆ ಎಂದು ಕಂಪನಿ ಹೇಳಿದೆ.
ಈ ವರ್ಷದ ಆರಂಭದಲ್ಲಿ ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ ಕಂಪನಿಯು ಹೈದರಾಬಾದ್‌ನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಭಾರತೀಯ ಸೇನೆಗೆ ಎಚ್–64 ಅಪಾಚೆಯ ಮುಖ್ಯ ಭಾಗವನ್ನು ಸಿದ್ಧಪಡಿಸಿ ನೀಡಿತ್ತು.
‘ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನೆರವಾಗುವ ನಮ್ಮ ಬದ್ಧತೆಯ ಮೂಲಕ ನಾವು ನಮ್ಮ ಸಾಧನೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದೇವೆ’ ಎಂದು ಬೋಯಿಂಗ್ ಕಂಪನಿಯ ಭಾರತೀಯ ವಿಭಾಗದ ಅಧ್ಯಕ್ಷ ಸಲಿಲ್ ಗುಪ್ತೆ ಹೇಳಿದ್ದಾರೆ.
2020ರಲ್ಲಿ ಭಾರತೀಯ ವಾಯು ಸೇನೆಗೆ 22 ಇ–ಮಾದರಿಯ ಅಪಾಚೆಗಳನ್ನು ಬೋಯಿಂಗ್ ನೀಡಿತ್ತು. ಇದೀಗ ಎಎಚ್–64ಇ ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಪಡಿಸುವ ಒಡಂಬಡಿಕೆ ಮಾಡಿಕೊಂಡಿದೆ. ಇವುಗಳನ್ನು 2024ರಲ್ಲಿ ಭಾರತೀಯ ಸೇನೆಗೆ ಕಂಪನಿಯು ಹಸ್ತಾಂತರಿಸಲಿದೆ.
‘ಎಚ್–64ಇ ಜಗತ್ತಿನಲ್ಲೇ ಅತ್ಯಂತ ಶಕ್ತಿಯುತ ಆಕ್ರಮಣಶಾಲಿ ಯುದ್ಧ ಹೆಲಿಕಾಪ್ಟರ್ ಆಗಿದೆ. ದಾಳಿ ಹಾಗೂ ರಕ್ಷಣೆ ಎರಡೂ ಕ್ಷೇತ್ರಗಳಲ್ಲಿ ಇದಕ್ಕೆ ಸರಿಸಾಟಿ ಯಾವುದೂ ಇಲ್ಲ’ ಎಂದು ಬೋಯಿಂಗ್‌ನ ದಾಳಿ ನಡೆಸುವ ಹೆಲಿಕಾಪ್ಟರ್ ವಿಭಾಗದ ಕಾರ್ಯಕ್ರಮ ಅಧಿಕಾರಿ ಕ್ರಿಸ್ಟೀನಾ ಉಪಾ ಹೇಳಿದ್ದಾರೆ.
2015ರಲ್ಲಿ ಭಾರತೀಯ ವಾಯು ಸೇನೆಯು ಬಹುಕೋಟಿ ಡಾಲರ್ ಮೊತ್ತದ ಗುತ್ತಿಗೆಯನ್ನು ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಜತೆ ಮಾಡಿಕೊಂಡಿತ್ತು. 2017ರಲ್ಲಿ ಆಯುಧ ವ್ಯವಸ್ಥೆ ಸಹಿತ ಆರು ಹೆಲಿಕಾಪ್ಟರ್ ಖರೀದಿಗೆ ₹4,168 ಕೋಟಿ ಮೊತ್ತದ ಒಪ್ಪಂದವನ್ನು ಭಾರತೀಯ ಸೇನೆ ಮಾಡಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.