ನವದೆಹಲಿ: ‘ದೇಶದ ಜಿಡಿಪಿ ನಾಲ್ಕು ಟ್ರಿಲಿಯನ್ ಡಾಲರ್ ದಾಟಿದೆ’ ಎಂಬ ಆಡಳಿತ ಪಕ್ಷ ಬಿಜೆಪಿಯ ಪ್ರತಿಪಾದನೆಯು, ‘ಒಂದು ಬೋಗಸ್ ಸುದ್ದಿಯಾಗಿದ್ದು, ಸುಖದ ಭ್ರಮೆಯನ್ನು ಸೃಷ್ಟಿಸುವ ಉದ್ದೇಶದ್ದಾಗಿದೆ’ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಕೇಂದ್ರದ ಕೆಲ ಸಚಿವರು ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯವರು ಈ ಬಗ್ಗೆ ಸುಳ್ಳು ಪ್ರತಿಪಾದನೆ ಮಾಡಿದ್ದಾರೆ ಎಂದು ‘ಎಕ್ಸ್’ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟೀಕಿಸಿದ್ದಾರೆ.
‘ಭಾನುವಾರ ಮಧ್ಯಾಹ್ನ 2.45ರಿಂದ ಸಂಜೆ 6.45ರವರೆಗೆ ಇಡೀ ದೇಶ ಕ್ರಿಕೆಟ್ ವೀಕ್ಷಿಸುತ್ತಿರುವಾಗ, ರಾಜಸ್ಥಾನ, ತೆಲಂಗಾಣದ ಕೆಲ ಹಿರಿಯ ಸಚಿವರು, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಪ್ರಧಾನಿಯವರ ಅಚ್ಚುಮೆಚ್ಚಿನ ಉದ್ಯಮಿ ಸೇರಿದಂತೆ ಸರ್ಕಾರದ ಕೆಲ ಹೊಗಳುಭಟ್ಟರು, ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ದಾಟಿದೆ ಎಂದು ಟ್ವೀಟ್ ಮಾಡಿದ್ದರು’ ಎಂದೂ ಟೀಕಿಸಿದ್ದಾರೆ.
‘ಇದು, ಸಂಪೂರ್ಣವಾಗಿ ಸುಳ್ಳಾಗಿರುವ, ನಕಲಿ ಸುದ್ದಿ. ಸರ್ಕಾರದ ಪರ ಸುದ್ದಿಯ ನಿರ್ವಹಣೆ ಮಾಡುವವರು ಮತ್ತು ಭಟ್ಟಂಗಿಗಳಿಂದ ನಡೆದ ಸುಖದ ಭ್ರಮೆಯನ್ನು ಸೃಷ್ಟಿಸುವ, ಮರುಕ ಉಂಟುಮಾಡುವ ಪ್ರಯತ್ನವಷ್ಟೇ’ ಎಂದೂ ಆರೋಪಿಸಿದ್ದಾರೆ.
ದೇಶದ ಜಿಡಿಪಿ 4 ಟ್ರಿಲಿಯನ್ ಡಾಲರ್ ದಾಟಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ದೂರದೃಷ್ಟಿ ನಾಯಕತ್ವ ಎಂದರೆ ಹೀಗಿರಬೇಕು. ನವಭಾರತದ ಪ್ರಗತಿಯು ಸುಂದರವಾಗಿ ಕಾಣುತ್ತಿದೆ’ ಎಂದಿದ್ದರು.
‘ಅಭಿನಂದನೆಗಳು ಭಾರತ. ದೇಶ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಇನ್ನೂ ಎರಡು ವರ್ಷಗಳು ಸಾಕು. ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರುತ್ತಿದೆ. ಜೈ ಹಿಂದ್’ ಎಂದು ಅದಾನಿ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದರು. ‘ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟುವತ್ತ ಸಾಗುತ್ತಿದೆ. ಇದು, ಮೋದಿಯವರ ಗ್ಯಾರಂಟಿ’ ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಸಂದೇಶ ಹಂಚಿಕೊಂಡಿದ್ದರು.
ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್, ಉದ್ಯಮಿ ಗೌತಮ್ ಅದಾನಿ ಅವರೂ ಈ ಕುರಿತ ಸಂದೇಶಗಳನ್ನು ಹಂಚಿಕೊಂಡಿದ್ದರು. ಈ ಸಂದೇಶ ಸಾಕಷ್ಟು ಹಂಚಿಕೆಯಾಗಿತ್ತು. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಪ್ರತಿಕ್ರಿಯೆ ನೀಡಿರಲಿಲ್ಲ.
ಐಎಂಎಫ್‌ನ ಅಂಕಿ ಅಂಶ ಆಧರಿಸಿದ, ವಿವಿಧ ದೇಶಗಳ ಜಿಡಿಪಿಯದ್ದು ಎನ್ನಲಾದ ಸ್ಕ್ರೀನ್ ಶಾಟ್ ಚಿತ್ರ ಕೂಡಾ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು. ಆದರೆ, ವಿವಿಧ ಕ್ಷೇತ್ರಗಳ ಅಂಕಿ ಅಂಶಗಳು ನಿರಂತರವಾಗಿ ಏರುಪೇರಾಗುವ ಕಾರಣ ಎಲ್ಲ ದೇಶಗಳ ಜಿಡಿಪಿಯನ್ನು ಏಕಕಾಲದಲ್ಲಿ ನೇರವಾಗಿ ಅವಲೋಕಿಸುವುದು ಕಷ್ಟ ಎಂದು ಹೇಳಲಾಗಿದೆ.
2023–24ರ ಏಪ್ರಿಲ್–ಜೂನ್ ಅವಧಿಯಲ್ಲಿ ಭಾರತದ ಜಿಡಿಪಿಯು ಶೇ 7.8ರಷ್ಟು ದಾಖಲಾಗಿತ್ತು. ಇದು, ಕಳೆದ ನಾಲ್ಕು ತ್ರೈಮಾಸಿಕ ಅವಧಿಯಲ್ಲಿಯೇ ಗರಿಷ್ಠವಾದುದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.